ಭಾರತ-ಆಸ್ಟ್ರೇಲಿಯ ಆಡಿರುವ ಐದು ಸರಣಿ ನಿರ್ಣಾಯಕ ಟೆಸ್ಟ್ ಪಂದ್ಯಗಳು

ಹೊಸದಿಲ್ಲಿ, ಮಾ.23: ಭಾರತ- ಆಸ್ಟ್ರೇಲಿಯ ನಡುವಿನ ನಾಲ್ಕನೆ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಧರ್ಮಶಾಲಾ ಸ್ಟೇಡಿಯಂನಲ್ಲಿ ವೇದಿಕೆ ಸಿದ್ಧವಾಗಿದೆ. ಪ್ರಸ್ತುತ ಸರಣಿ 1-1 ರಿಂದ ಸಮಬಲದಲ್ಲಿದ್ದು ನಾಲ್ಕನೆ ಪಂದ್ಯವನ್ನು ಜಯಿಸುವ ತಂಡ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ತನ್ನದಾಗಿಸಿಕೊಳ್ಳಲಿದೆ.
ತವರು ನೆಲದಲ್ಲಿ ಸುದೀರ್ಘ ಸರಣಿ ಜಯಿಸಿರುವ ದಾಖಲೆ ಹೊಂದಿರುವ ವಿರಾಟ್ ಕೊಹ್ಲಿ ಪಡೆ ಹಾಗೂ ಏಷ್ಯಾದಲ್ಲಿ ಸತತ 9 ಟೆಸ್ಟ್ ಪಂದ್ಯಗಳನ್ನು ಕಳೆದುಕೊಂಡಿರುವ ಆಸ್ಟ್ರೇಲಿಯ ಸರಣಿ ನಿರ್ಣಾಯಕ ಪಂದ್ಯ ಆಡಲು ಸಜ್ಜಾಗಿವೆ.
ಭಾರತ 2014-15ರಲ್ಲಿ ಕೊನೆಯ ಬಾರಿ ಬಾರ್ಡರ್-ಗವಾಸ್ಕರ್ ಟ್ರೋಫಿ ಜಯಿಸಿತ್ತು. ಆಸೀಸ್ ಈ ಪಂದ್ಯವನ್ನು ಗೆಲ್ಲಲು ಸಮರ್ಥವಾದರೆ ಸ್ಮರಣೀಯ ಸರಣೀ ಗೆಲುವಿನೊಂದಿಗೆ ಟ್ರೋಫಿಯನ್ನು ತವರಿಗೆ ಕೊಂಡೊಯ್ಯಲಿದೆ.
ಭಾರತ-ಆಸ್ಟ್ರೇಲಿಯ ನಡುವೆ ಈ ಹಿಂದೆ ನಡೆದಿರುವ ಐದು ಸ್ಮರಣೀಯ ಸರಣಿಯ ನಿರ್ಣಾಯಕ ಪಂದ್ಯಗಳ ಬಗ್ಗೆ ಒಂದು ಅವಲೋಕನ ಇಂತಿದೆ...
ಅಡಿಲೇಡ್, 1978: ಭಾರತ ವಿರುದ್ಧ 1978ರಲ್ಲಿ ನಡೆದಿದ್ದ 5ನೆ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು 47 ರನ್‌ನಿಂದ ಜಯಿಸಿದ್ದ ಆಸ್ಟ್ರೇಲಿಯ ತಂಡ ಸರಣಿಯನ್ನು 3-2 ಅಂತರದಿಂದ ಗೆದ್ದುಕೊಂಡಿತ್ತು. ಬ್ರಿಸ್ಬೇನ್(16ರನ್) ಹಾಗೂ ಪರ್ತ್‌ನಲ್ಲಿ(2 ವಿಕೆಟ್) ರೋಚಕ ಜಯ ಸಾಧಿಸಿದ್ದ ಬಾಬ್ ಸಿಂಪ್ಸನ್ ನೇತೃತ್ವದ ಆಸೀಸ್ 2-0 ಮುನ್ನಡೆ ಸಾಧಿಸಿತ್ತು. ಬಿಷನ್ ಸಿಂಗ್ ಬೇಡಿ ನಾಯಕತ್ವದ ಭಾರತ ತಂಡ ಮೆಲ್ಬೋರ್ನ್(22 ರನ್) ಹಾಗೂ ಸಿಡ್ನಿಯಲ್ಲಿ(ಇನಿಂಗ್ಸ್, 2 ರನ್)ಜಯಭೇರಿ ಬಾರಿಸಿ ಸರಣಿಯನ್ನು 2-2 ರಿಂದ ಸಮಬಲಗೊಳಿಸಿತ್ತು.
5ನೆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸೀಸ್ 505 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಭಾರತ ಗುಂಡಪ್ಪ ವಿಶ್ವನಾಥ್(89), ದಿಲಿಪ್ ವೆಂಗ್‌ಸರ್ಕಾರ್(44) ಹಾಗು ಸೈಯದ್ ಕಿರ್ಮಾನಿ(48) ಶ್ರಮದಿಂದ 269 ರನ್ ಗಳಿಸಿತ್ತು. 2ನೆ ಇನಿಂಗ್ಸ್‌ನಲ್ಲಿ 256 ರನ್ ಗಳಿಸಿದ್ದ ಆಸೀಸ್ ತಂಡ ಭಾರತಕ್ಕೆ 493 ರನ್ ಗುರಿ ನೀಡಿತ್ತು. ಮೊಹಿಂದರ್ ಅಮರ್‌ನಾಥ್(86), ವಿಶ್ವನಾಥ್(73) ಹಾಗೂ ವೆಂಗ್‌ಸರ್ಕಾರ್(78) ಹೋರಾಟದ ಬಲದಿಂದ 445 ರನ್‌ಗೆ ಆಲೌಟಾಗಿ 47 ರನ್‌ಗಳಿಂದ ಸೋತಿತ್ತು.
ಮೆಲ್ಬೋರ್ನ್ 1981: ಸರಣಿಯಲ್ಲಿ ಒಂದು ಗೆಲುವು, ಒಂದು ಡ್ರಾ ಸಾಧಿಸಿದ್ದ ಭಾರತಕ್ಕೆ ಮತ್ತೊಂದು ಸರಣಿ ಸೋಲಿನಿಂದ ಪಾರಾಗಲು ಈ ಪಂದ್ಯವನ್ನು ಗೆಲ್ಲಲೇಬೇಕಾಗಿತ್ತು. ಕಪಿಲ್‌ದೇವ್ ಅಮೋಘ ಬೌಲಿಂಗ್ ನೆರವಿನಿಂದ ಆಸೀಸ್‌ನ್ನು 2ನೆ ಇನಿಂಗ್ಸ್‌ನಲ್ಲಿ ಕೇವಲ 83 ರನ್‌ಗೆ ಆಲೌಟ್ ಮಾಡಿದ್ದ ಭಾರತ 59 ರನ್‌ಗಳ ಅಂತರದಿಂದ ಅನಿರೀಕ್ಷಿತ ಜಯ ಸಾಧಿಸಿತ್ತು. ಭಾರತ ಮೊದಲ ಇನಿಂಗ್ಸ್‌ನಲ್ಲಿ 237 ರನ್ ಗಳಿಸಿತ್ತು. ಆಸ್ಟ್ರೇಲಿಯ ಅಲನ್ ಬಾರ್ಡರ್ ಶತಕದ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 419 ರನ್ ಗಳಿಸಿತ್ತು. ಗವಾಸ್ಕರ್, ಚೇತನ್ ಚೌಹಾಣ್, ವೆಂಗ್‌ಸರ್ಕಾರ್, ವಿಶ್ವನಾಥ್ ಹಾಗೂ ಸಂದೀಪ್ ಪಾಟೀಲ್‌ರ ಸಂಘಟಿತ ಪ್ರದರ್ಶನದಿಂದ ಫಾಲೋ-ಆನ್‌ನಿಂದ ಪಾರಾಗಿದ್ದ ಭಾರತ ತಂಡ ಆಸೀಸ್ ಗೆಲುವಿಗೆ ಕೇವಲ 143 ರನ್ ಗುರಿ ನೀಡಿತ್ತು. ಕಪಿಲ್‌ದೇವ್ ದಾಳಿಗೆ ಸಿಲುಕಿದ ಆಸೀಸ್ ಗುರಿ ತಲುಪಲು ವಿಫಲವಾಗಿತ್ತು.
ಚೆನ್ನೈ 2001: ಮ್ಯಾಥ್ಯೂ ಹೇಡನ್‌ರ ಚೊಚ್ಚಲ ದ್ವಿಶತಕದ ಹೊರತಾಗಿಯೂ ಹರ್ಭಜನ್ ಸಿಂಗ್(7-133) ಸ್ಪಿನ್ ದಾಳಿಗೆ ಸಿಲುಕಿದ ಆಸೀಸ್ ಮೊದಲ ಇನಿಂಗ್ಸ್‌ನಲ್ಲಿ 391 ರನ್ ಗಳಿಸಿತ್ತು. ಸಚಿನ್ ತೆಂಡುಲ್ಕರ್ ಶತಕ(126) ಹಾಗೂ ರಾಹುಲ್‌ದ್ರಾವಿಡ್(81)5ನೆ ವಿಕೆಟ್‌ಗೆ 169 ರನ್ ಜೊತೆಯಾಟ ನಡೆಸಿ ಭಾರತ 501 ರನ್ ಗಳಿಸಲು ನೆರವಾಗಿದ್ದರು. ಭಾರತ 110 ರನ್ ಮುನ್ನಡೆ ಸಾಧಿಸಿತ್ತು.
2ನೆ ಇನಿಂಗ್ಸ್‌ನಲ್ಲಿ ಹರ್ಭಜನ್ ಸಿಂಗ್ ಜೀವನಶ್ರೇಷ್ಠ ಬೌಲಿಂಗ್‌ಗೆ(8-84) ತತ್ತರಿಸಿದ್ದ ಆಸೀಸ್ 264 ರನ್‌ಗೆ ಆಲೌಟಾಯಿತು. ಭಾರತದ ಗೆಲುವಿಗೆ 155 ರನ್ ಗುರಿ ನೀಡಿತ್ತು. ಭಾರತ ಒಂದು ಹಂತದಲ್ಲಿ 151 ರನ್‌ಗೆ 8 ವಿಕೆಟ್ ಕಳೆದುಕೊಂಡು ಸೋಲಿನ ದವಡೆಯಲ್ಲಿತ್ತು. ಆಗ ಸಮೀರ್ ದಿೆ(ಅಜೇಯ 22) ಹಾಗೂ ಹರ್ಭಜನ್(ಅಜೇಯ 3) ವೀರೋಚಿತ ಪ್ರದರ್ಶನ ನೀಡಿ ಭಾರತಕ್ಕೆ 2 ವಿಕೆಟ್‌ಗಳ ರೋಚಕ ಗೆಲುವು ತಂದಿದ್ದರು. ಈ ಗೆಲುವಿನೊಂದಿಗೆ ಭಾರತಕ್ಕೆ ಸರಣಿಯನ್ನು 2-1 ರಿಂದ ಗೆದ್ದುಕೊಂಡಿತ್ತು.
ಸಿಡ್ನಿ 2004: ಸೌರವ್ ಗಂಗುಲಿ ನೇತೃತ್ವದ ಭಾರತ ತಂಡ ಸಿಡ್ನಿ ಟೆಸ್ಟ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದರೂ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಗರಿಷ್ಠ ಸ್ಕೋರ್‌ನ ಈ ಪಂದ್ಯ ಡ್ರಾನಲ್ಲಿ ಕೊನೆಗೊಂಡಿತ್ತು. ನಾಲ್ಕು ಪಂದ್ಯಗಳ ಸರಣಿಯು 1-1 ರಿಂದ ಕೊನೆಗೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಸಚಿನ್ ತೆಂಡುಲ್ಕರ್ ಸಿಡಿಸಿದ್ದ ಅಜೇಯ 241 ರನ್, ಲಕ್ಷ್ಮಣ್ 178 ರನ್ ನೆರವಿನಿಂದ 7 ವಿಕೆಟ್‌ಗೆ 707 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತ್ತು. ಆಸ್ಟ್ರೇಲಿಯ ತಂಡ ಅನಿಲ್ ಕುಂಬ್ಳೆ(8-141) ದಾಳಿಗೆ ಸಿಲುಕಿ 474 ರನ್‌ಗೆ ಆಲೌಟಾಗಿತ್ತು. ಭಾರತಕ್ಕೆ 231 ರನ್ ಮುನ್ನಡೆ ಲಭಿಸಿತ್ತು. ಫಾಲೋ-ಆನ್ ವಿಧಿಸದೆ ಟೀಕೆಗೆ ಗುರಿಯಾದ ನಾಯಕ ಗಂಗುಲಿ ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು. ದ್ರಾವಿಡ್(91) ಹಾಗೂ ತೆಂಡುಲ್ಕರ್(60) ಭಾರತದ ಮುನ್ನಡೆಯನ್ನು 442 ರನ್‌ಗೆ ವಿಸ್ತರಿಸಿದ್ದರು.
443 ರನ್ ಗುರಿ ಪಡೆದಿದ್ದ ಆಸೀಸ್ 6 ವಿಕೆಟ್ ನಷ್ಟಕ್ಕೆ 367 ರನ್ ಗಳಿಸಿ ಪಂದ್ಯವನ್ನು ಡ್ರಾಗೊಳಿಸಿತ್ತು.
ನಾಗ್ಪುರ 2008: ಭಾರತ ತಂಡ 2008ರ ನವೆಂಬರ್‌ನಲ್ಲಿ 1-0 ಮುನ್ನಡೆಯೊಂದಿಗೆ ನಾಲ್ಕನೆ ಹಾಗೂ ಅಂತಿಮ ಟೆಸ್ಟ್ ಪಂದ್ಯವಾಡಲು ನಾಗ್ಪುರಕ್ಕೆ ಬಂದಿತ್ತು. ಆಸೀಸ್‌ನ್ನು 172 ರನ್‌ಗಳ ಅಂತರದಿಂದ ಮಣಿಸಿ ಟ್ರೋಫಿಯನ್ನು ವಶಪಡಿಸಿಕೊಂಡಿತ್ತು. ಈ ಪಂದ್ಯ ಸೌರವ್ ಗಂಗುಲಿಗೆ ವಿದಾಯದ ಪಂದ್ಯವಾಗಿತ್ತು.
ಮೊದಲ ಇನಿಂಗ್ಸ್‌ನಲ್ಲಿ ಸಚಿನ್ ತೆಂಡುಲ್ಕರ್(109) ಶತಕದ ಸಹಾಯದಿಂದ ಭಾರತ ತಂಡ 441 ರನ್ ಗಳಿಸಿತ್ತು. ಆಸೀಸ್‌ನ ಜೇಸನ್ ಕ್ರೆಝಾ(8-215) 8 ವಿಕೆಟ್ ಉರುಳಿಸಿ ಗಮನ ಸೆಳೆದಿದ್ದರು. ಇದಕ್ಕೆ ಉತ್ತರವಾಗಿ ಆಸೀಸ್ 355 ರನ್‌ಗೆ ಆಲೌಟಾಗಿತ್ತು. 2ನೆ ಇನಿಂಗ್ಸ್‌ನಲ್ಲಿ 295 ರನ್ ಗಳಿಸಿದ್ದ ಭಾರತ ತಂಡ ಆಸೀಸ್ ಗೆಲುವಿಗೆ 382 ರನ್ ಗುರಿ ನೀಡಿತ್ತು. ಹರ್ಭಜನ್ ಸಿಂಗ್(4-64) ಹಾಗೂ ಅಮಿತ್ ಮಿಶ್ರಾ(3-27) ದಾಳಿಗೆ ಸಿಲುಕಿದ್ದ ಕಾಂಗರೂ ಪಡೆ ಕೇವಲ 209 ರನ್‌ಗೆ ಆಲೌಟಾಗಿ ಹೀನಾಯ ಸೋಲುಂಡಿತ್ತು. ಈ ಪಂದ್ಯದಲ್ಲಿ ಹರ್ಭಜನ್ 300 ವಿಕೆಟ್ ಪೂರೈಸಿದ ಭಾರತದ 3ನೆ ಬೌಲರ್ ಎನಿಸಿಕೊಂಡಿದ್ದರು. ಭರ್ಜರಿ ಗೆಲುವಿನೊಂದಿಗೆ ಭಾರತ 4 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿತ್ತು.







