ರೈನಾ ಬಿಸಿಸಿಐ ಗುತ್ತಿಗೆ ಕಳೆದುಕೊಳ್ಳಲು ಕಾರಣ ಬಹಿರಂಗ

ಹೊಸದಿಲ್ಲಿ, ಮಾ.23: ಒಂದೊಮ್ಮೆ ಭಾರತೀಯ ಕ್ರಿಕೆಟ್ ತಂಡದ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದ ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ಹೆಸರು ಬುಧವಾರ ಬಿಸಿಸಿಐ ಪ್ರಕಟಿಸಿರುವ ಆಟಗಾರರ ಕೇಂದ್ರೀಯ ಗುತ್ತಿಗೆ ಪಟ್ಟಿಯಲ್ಲಿ ಮಾಯವಾಗಿತ್ತು.
223 ಏಕದಿನ ಪಂದ್ಯಗಳಲ್ಲಿ 5,568 ರನ್ ಹಾಗೂ 65 ಟ್ವೆಂಟಿ-20 ಪಂದ್ಯಗಳಲ್ಲಿ 1,307 ರನ್ ಗಳಿಸಿದ್ದ ರೈನಾರನ್ನು ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕೈಬಿಟ್ಟಿರುವುದೇಕೆ? ಕೆಲವು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ. 30ರ ಹರೆಯದ ರೈನಾರನ್ನು ಆಟಗಾರರ ಗುತ್ತಿಗೆ ಪಟ್ಟಿಯಿಂದ ಕೈಬಿಡಲು ಕಾರವೇನೆಂಬುದನ್ನು ಆಂಗ್ಲ ಪತ್ರಿಕೆಯೊಂದು ಬಹಿರಂಗಪಡಿಸಿದೆ.
ರೈನಾ 2005ರಲ್ಲಿ ವಿವಾಹವಾದ ಬಳಿಕ ಕ್ರಿಕೆಟ್‌ನಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ. ತನ್ನ ಕುಟುಂಬದತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವುದಕ್ಕೆ ಹೆಚ್ಚಾಗಿ ಬೇರೊಂದು ವ್ಯವಹಾರ ಆರಂಭಿಸುವತ್ತ ಹೆಚ್ಚು ವ್ಯಸ್ತರಾಗಿದ್ದಾರೆ. ರೈನಾ ಈ ಋತುವಿನಲ್ಲಿ ಉತ್ತರಪ್ರದೇಶದ ಪರ ಕೇವಲ ಮೂರು ರಣಜಿ ಪಂದ್ಯಗಳನ್ನು ಆಡಿದ್ದರು. ದೇಶೀಯ ಟ್ವೆಂಟಿ-20 ಹಾಗೂ ಏಕದಿನ ಟೂರ್ನಮೆಂಟ್‌ನಿಂದಲೂ ದೂರ ಉಳಿದಿದ್ದರು ಎಂದು ಉತ್ತರಪ್ರದೇಶದ ಮಾಜಿ ಕೋಚ್‌ವೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಆಂಗ್ಲಪತ್ರಿಕೆ ವರದಿ ಮಾಡಿದೆ.
‘‘ರೈನಾ ಗೃಹಸ್ಥನಾದ ಬಳಿಕ ಅವರ ಆದ್ಯತೆ ಬದಲಾಗಿದೆ. ಅವರು ಕ್ರಿಕೆಟ್‌ನತ್ತ ಹೆಚ್ಚು ಏಕಾಗ್ರತೆವಹಿಸದೇ ಇರುವುದನ್ನು ನಾನು ಗಮನಿಸಿದ್ದೇನೆ. ಅವರೋರ್ವ ನಿರಾಸಕ್ತಿಯ ಕ್ರಿಕೆಟಿಗನಾಗಿದ್ದಾರೆ. ಅವರು ಈ ಋತುವಿನಲ್ಲಿ ಉತ್ತರಪ್ರದೇಶದ ಪರ ಕೇವಲ 3 ರಣಜಿ ಪಂದ್ಯಗಳನ್ನಾಡಿದ್ದಾರೆ. ಮುಷ್ತಾಕ್ ಅಲಿ ಹಾಗೂ ವಿಜಯ್ ಹಝಾರೆ ಟೂರ್ನಮೆಂಟ್‌ಗಳಲ್ಲೂ ಭಾಗವಹಿಸಿಲ್ಲ ಎಂದು ಉತ್ತರಪ್ರದೇಶದ ಮಾಜಿ ಕೋಚ್ ಪತ್ರಿಕೆಗೆ ತಿಳಿಸಿದ್ದಾರೆ.
ರೈನಾ ಭಾರತೀಯ ಕ್ರಿಕೆಟ್ ತಂಡದಲ್ಲಿ ಟೆಸ್ಟ್ ಅಥವಾ ಏಕದಿನ ಕ್ರಿಕೆಟ್‌ಗೆ ವಾಪಸಾಗುವ ಸಾಧ್ಯತೆ ಕ್ಷೀಣಿಸುತ್ತಿದೆ. ಅವರೀಗ ಟ್ವೆಂಟಿ-20 ಪಂದ್ಯದತ್ತ ಮಾತ್ರ ಗಮನ ಹರಿಸುತ್ತಿದ್ದು, ಎಲ್ಲವೂ ಐಪಿಎಲ್‌ನಲ್ಲಿ ಅವರ ಪ್ರದರ್ಶನ ಅವಲಂಬಿತವಾಗಿದೆ. ಐಪಿಎಲ್‌ನಲ್ಲಿ ರೈನಾ ಗುಜರಾತ್ ಲಯನ್ಸ್ ತಂಡದ ನಾಯಕನಾಗಿದ್ದಾರೆ.







