ಅಪಾರ ತಾಳ್ಮೆ ದೀರ್ಘಕಾಲದ ಶ್ರಮದ ಫಲ: ಪೂಜಾರ
ಧರ್ಮಶಾಲಾ, ಮಾ.23: ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ‘ತಾಳ್ಮೆಗೆ’ ಎರಡನೆ ಹೆಸರಾಗಿದ್ದು ಟೆಸ್ಟ್ ಕ್ರಿಕೆಟ್‌ನಲ್ಲಿ ಸಹನಾಮೂರ್ತಿಯಾಗಿ ಗಮನ ಸೆಳೆಯುತ್ತಿದ್ದಾರೆ. ಅವರ ಅಪಾರ ತಾಳ್ಮೆಯ ಹಿಂದೆ 13 ವರ್ಷಗಳ ಸುದೀರ್ಘ ಶ್ರಮ ಅಡಗಿದೆ.
‘‘ನನ್ನ ತಾಳ್ಮೆಯ ಹಿಂದೆ ಕಠಿಣ ಶ್ರಮ ಅಡಗಿದೆ. ನಾನು 8ನೆ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಆರಂಭಿಸಿದ್ದೆ. 13ನೆ ಹರೆಯದಲ್ಲಿ ತನ್ನ ರಾಜ್ಯದ ಪರ ಮೊದಲ ಪಂದ್ಯ ಆಡಿದ್ದೆ. ಆ ಬಳಿಕ ಟೆಸ್ಟ್ ಕ್ರಿಕೆಟ್ ಮಾದರಿಯ ಪಂದ್ಯವನ್ನು ಆಡುತ್ತಾ ಬಂದಿದ್ದೇನೆ. ದೇಶೀಯ ಕ್ರಿಕೆಟ್‌ನಲ್ಲಿ ಆಡಿರುವ ಅನುಭವ ಹಾಗೂ ಕಠಿಣ ಪರಿಶ್ರಮದ ಫಲ ಈಗ ಲಭಿಸುತ್ತಿದೆ’’ ಎಂದು ಪೂಜಾರ ಹೇಳಿದ್ದಾರೆ.
ಸೌರಾಷ್ಟ್ರದ ಬ್ಯಾಟ್ಸ್‌ಮನ್ ಪೂಜಾರ ಮೂರನೆ ಟೆಸ್ಟ್ ಪಂದ್ಯದಲ್ಲಿ ಒಂದೇ ಇನಿಂಗ್ಸ್‌ನಲ್ಲಿ ಗರಿಷ್ಠ ಎಸೆತಗಳನ್ನು ಎದುರಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಭಾಜನರಾಗಿದ್ದರು. ಈ ಮೂಲಕ ಮಹಾನ್‌ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್‌ರ ದಾಖಲೆಯನ್ನು ಮುರಿದಿದ್ದರು.
‘‘ಹೇಗೆ ಬ್ಯಾಟಿಂಗ್‌ನ್ನು ಮುಂದುವರಿಸಬೇಕು. ದೀರ್ಘಸಮಯದ ತನಕ ಹೇಗೆ ಏಕಾಗ್ರತೆ ಕಾಯ್ದುಕೊಳ್ಳಬೇಕು ಎಂದು ನನಗೆ ಗೊತ್ತಿದೆ. ನಾನು ಪಥ್ಯದತ್ತ ಹೆಚ್ಚು ಗಮನ ನೀಡುವೆ. ಸರಿಯಾದ ಸಮಯಕ್ಕೆ ನಿದ್ರಿಸುವೆ. ಪಂದ್ಯ ಮುಗಿದ ಬಳಿಕ ಮಸಾಜ್‌ನ್ನು ಮಾಡಿಸಿಕೊಳ್ಳುವೆ. ಇದು ನನಗೆ ಚೇತರಿಸಿಕೊಳ್ಳಲು ನೆರವಾಗುತ್ತದೆ ಎಂದು ಪೂಜಾರ ತಿಳಿಸಿದರು.







