ನಿರುಪಯುಕ್ತ ಕಚೇರಿಗಳು ಬೇಕೇ?
ಮಾನ್ಯರೆ,
ಕರ್ನಾಟಕ ರಾಜ್ಯ ಸರಕಾರದ ಒಂದು ಕಾಲದ ಅತ್ಯಂತ ಮಹತ್ವದ್ದಾಗಿದ್ದ ಉದ್ಯೋಗ ವಿನಿಮಯ ಕೇಂದ್ರ ಕಚೇರಿ ಈಗ ಒಂದು ರೀತಿಯಲ್ಲಿ ನಿರುಪಯುಕ್ತ ಕಚೇರಿಯಾಗಿದೆ.
ಎಸೆಸೆಲ್ಸಿ ಅನುತ್ತೀರ್ಣರಾದವರಿಗೆ ಕೆಂಗಲ್ ಹನುಮಂತಯ್ಯ ರಸ್ತೆಯ ಬಳಿಯಲ್ಲಿ ಮತ್ತು ಎಸೆಸೆಲ್ಸಿ ನಂತರದ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಕೆಂಪೇಗೌಡ ರಸ್ತೆಯ ಜನತಾ ಬಝಾರಿನ ಕಟ್ಟಡದಲ್ಲಿ ಈ ಕಚೇರಿಗಳು ಇಂದಿಗೂ ಇವೆ. ಕೆಲವು ದಶಕಗಳ ಹಿಂದೆ ಐಟಿಐ ಪಾಸಾಗಲು ಮತ್ತು ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಹಾಗೂ ಕೇಂದ್ರ ಸರಕಾರದ ಸಾರ್ವಜನಿಕ ಉದ್ದಿಮೆಗಳಲ್ಲಿ ಸ್ಟೈಫಂಡರಿ ಕೋರ್ಸುಗಳಿಗಾಗಿ ನಿರುದ್ಯೋಗಿ ಯುವಕರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳುತ್ತಿದ್ದರು. ರಾಜ್ಯ ಸರಕಾರವೂ ಬಹುತೇಕ ಇಲಾಖೆಗಳಲ್ಲಿ ಈ ಕಚೇರಿಯ ಮೂಲಕವೇ ಉದ್ಯೋಗಗಳ ಅವಕಾಶವನ್ನು ಕಲ್ಪಿಸಿಕೊಡುತಿತ್ತು.
ಈಗ ಕಾಲ ಬದಲಾಗಿದೆ. ರಾಜ್ಯ ಸರಕಾರದ ಬಹುತೇಕ ಕಚೇರಿಗಳಲ್ಲಿ ಆನ್‌ಲೈನ್ ಮೂಲಕವೇ ಉದ್ಯೋಗಾವಕಾಶಗಳಿಗೆ ಸಂಬಂಧಪಟ್ಟ ಅರ್ಜಿಗಳನ್ನು ಸ್ವೀಕರಿಸುತ್ತಾರೆ. ಇನ್ನು ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ಮಾಹಿತಿ ತಂತ್ರಜ್ಞಾನದ ಕಂಪೆನಿಗಳು ಕ್ಯಾಂಪಸ್ ಸೆಲೆಕ್ಷನ್ ಹಾಗೂ ಆನ್‌ಲೈನ್ ಮೂಲಕವೇ ಅಭ್ಯರ್ಥಿಗಳ ಪರಿಚಯ ಪತ್ರ ಮತ್ತು ಇತರ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸಾರ್ವಜನಿಕ ಉದ್ದಿಮೆಗಳು ಮುಚ್ಚಲ್ಪಟ್ಟಿದೆ ಇಲ್ಲವೇ ಮುಚ್ಚುವ ಹಂತದಲ್ಲಿವೆ. ಹೀಗಾಗಿ ಉದ್ಯೋಗ ವಿನಿಮಯ ಕೇಂದ್ರ ಕಚೇರಿಗಳ ಆವಶ್ಯಕತೆ ಈಗ ಯಾರಿಗೂ ಇಲ್ಲವಾಗಿದೆ. ಹೀಗಾಗಿ ಅನವಶ್ಯಕವಾದ ಈ ಕಚೇರಿಗಳನ್ನು ಇನ್ನೂ ಮುಂದುವರಿಸುವುದರ ಬಗ್ಗೆ ರಾಜ್ಯ ಸರಕಾರ ಚಿಂತಿಸಿ, ಅವಶ್ಯವಿಲ್ಲವೆನಿಸಿದರೆ ಇದರ ಬದಲಿಗೆ ಕಾರ್ಮಿಕ ಇಲಾಖೆಗೆ ಸಂಬಂಧಿತ ಕೆಲಸಗಳಿಗೆ ಈ ಕಚೇರಿಗಳನ್ನು ಬಳಸಿಕೊಳ್ಳಬಹುದಲ್ಲವೇ?.





