ಬಾಬರಿ ಮಸೀದಿ ನಿರ್ಮಾಣಕ್ಕೆ ಬಿಡೆವು: ವಿಹಿಂಪ

ಮೀರತ್, ಮಾ.24: ರಾಮಮಂದಿರ ವಿವಾದವನ್ನು ಪರಸ್ಪರ ಮಾತುಕತೆ ಮೂಲಕ ನ್ಯಾಯಾಲಯದ ಹೊರಗೆಯೇ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಸಲಹೆ ನೀಡಿದ ಮರುದಿನವೇ ವಿಶ್ವಹಿಂದೂ ಪರಿಷತ್, "ದೇಶದ ಯಾವುದೇ ಕಡೆಯಲ್ಲಿ ಬಾಬರಿ ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ" ಎಂದು ಕ್ಯಾತೆ ತೆಗೆದಿದೆ.
"ದೇಶದ ಎಲ್ಲೂ ಬಾಬರಿ ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡೆವು. ಬಾಬರ್ ಮುಸ್ಲಿಮರ ದೇವರಲ್ಲ. ಆದರೂ ಅವರು ಈ ದೇಶದಲ್ಲಿ ಬಾಬರಿ ಮಸೀದಿ ನಿರ್ಮಾಣಕ್ಕೆ ಬಯಸಿದ್ದಾರೆ. ಆತ ದೇಶವನ್ನು ಲೂಟಿ ಮಾಡಿ ಜನರನ್ನು ಇಸ್ಲಾಂಗೆ ಮತಾಂತರಿಸಿದ್ದಾನೆ. ಆತನ ಹೆಸರಿನಲ್ಲಿ ಯಾವುದೇ ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ನಾವು ಮುಸ್ಲಿಮರಿಗೆ ವಿರುದ್ಧವಲ್ಲ. ಅಯೋಧ್ಯೆಯ 84 ಕೋಸಿ ಪರಿಕ್ರಮದ ಹೊರಗೆ ಎಲ್ಲಿ ಬೇಕಾದರೂ ಮಸೀದಿ ಕಟ್ಟಿಕೊಳ್ಳಬಹುದು. ಆದರೆ ಬಾಬರನ ಹೆಸರಿನಲ್ಲಿ ಕಟ್ಟಿಕೊಳ್ಳಲು ಸಾಧ್ಯವಿಲ್ಲ" ಎಂದು ವಿಶ್ವಹಿಂದೂ ಪರಿಷತ್‌ನ ಯುವ ವಿಭಾಗವಾದ ಬಜರಂಗ ದಳ ರಾಜ್ಯ ಸಂಚಾಲಕ ಬಾಲರಾಜ್ ಡುಂಗರ್ ಹೇಳಿಕೆ ನೀಡಿದ್ದಾರೆ.
ಗುರುವಾರ ವಿಎಚ್‌ಪಿ ರಾಮೋತ್ಸವ ಸಂಕಲ್ಪ ಸಭಾ ಆರಂಭಿಸಿದ್ದು, ಇದು ದೇಶಾದ್ಯಂತ ನಡೆಯಲಿದೆ ಎಂದು ದುಂಗರ್ ಹೇಳಿದ್ದಾರೆ. ಇಂಥ ಸಭೆಗಳ ಮುಖ್ಯ ಉದ್ದೇಶವೆಂದರೆ, ಹಿಂದೂಗಳಲ್ಲಿ ಜಾಗೃತಿ ಮೂಡಿಸುವುದು ಹಾಗೂ ರಾಮ ಮಂದಿರಕ್ಕಾಗಿ ಅವರನ್ನು ಸಂಘಟಿಸುವುದು. ಈ ಸಂಬಂಧ ರ್ಯಾಲಿಗಳು ಹಾಗೂ ಆರತಿಗಳು ನಡೆಯಲಿವೆ ಎಂದು ಹೇಳಿದರು.
ಸುಪ್ರೀಂಕೋರ್ಟ್ ಸಲಹೆ ಬಗ್ಗೆ ಪ್ರತಿಕ್ರಿಯಿಸಿದ ವಿಎಚ್‌ಪಿ ರಾಜ್ಯ ಮಾಧ್ಯಮ ವಕ್ತಾರ ಶೀಲೇಂದ್ರ ಚೌಹಾಣ್, "ವಿವಾದವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಕೊಳ್ಳಲು ನಾವು ಬದ್ಧ. ಆದರೆ ಇನ್ನೊಂದು ಪಕ್ಷದವರು ಸಿದ್ಧರಿಲ್ಲ. ಬಾಬರಿ ಮಸೀದಿ ನಿರ್ಮಾಣಕ್ಕೆ ನಾವು ಅವಕಾಶ ಕೊಡುವುದಿಲ್ಲ. ಈಗ ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ 'ಹಿಂದೂ' ಸರ್ಕಾರ ಇದ್ದು, ಗುಜರಾತ್‌ನ ಸೋಮನಾಥ ದೇವಾಲಯ ನಿರ್ಮಾಣಕ್ಕೆ ಮಸೂದೆ ಮಂಡಿಸಿದಂತೆ ರಾಮ ಮಂದಿರ ವಿಚಾರದಲ್ಲೂ ಮಸೂದೆ ಮಂಡಿಸಿ ಹಾದಿ ಸುಗಮಗೊಳಿಸಬೇಕು" ಎಂದು ಅಭಿಪ್ರಾಯಪಟ್ಟರು.







