ದೇಶದ ಈ ಕಿರಿಯ ವಿದ್ಯಾರ್ಥಿನಿ ಪೈಲಟ್ ಆಯೇಷಾ ಅಝೀಝ್ ಬಗ್ಗೆ ನಿಮಗೆ ಗೊತ್ತೇ?

ಮುಂಬೈ, ಮಾ.23: ಈ ವಿದ್ಯಾರ್ಥಿನಿ ದೇಶದ ಅತಿ ಕಿರಿಯ ಪೈಲಟ್ ಎಂಬ ಹೆಗ್ಗಳಿಕೆಗೆ ಸಜ್ಜಾಗಿದ್ದಾಳೆ. 21 ವರ್ಷದ ಆಯೆಷಾ ಅಝೀಝ್ ಈಗಾಗಲೇ ವಾಣಿಜ್ಯ ಪೈಲಟ್ ಲೈಸನ್ಸ್ (ಸಿಪಿಎಲ್) ಪಡೆದಿದ್ದು, ಒಂದೆರಡು ದಿನಗಳಲ್ಲಿ ಪ್ರಯಾಣಿಕ ವಿಮಾನ ಚಾಲನೆ ಲೈಸನ್ಸ್ ಕೂಡಾ ಪಡೆಯಲಿದ್ದಾರೆ.
ಈ ಅಮೋಘ ಸಾಧನೆಗಾಗಿ ಆಯೆಷಾ ಅವರನ್ನು ನಗರದ ರಹ್ಮಾನಿ ಗ್ರೂಪ್ ಸಂಸ್ಥೆಯು ಶುಕ್ರವಾರ ಮೆರೈನ್ ಲೈನ್ಸ್ ಬಳಿ ಇಸ್ಲಾಂ ಜಿಮ್ಖಾನಾದಲ್ಲಿ ಸನ್ಮಾನಿಸಲಿದೆ.
ದೇಶದ ಅತಿ ಕಿರಿಯ ವಿದ್ಯಾರ್ಥಿ ಪೈಲಟ್ ಎಂಬ ಹೆಗ್ಗಳಿಕೆಗೆ 16ನೇ ವಯಸ್ಸಿನಲ್ಲೇ ಪಾತ್ರರಾಗಿದ್ದ ಆಯೆಷಾ, 2011ರಲ್ಲಿ ಈ ಲೈಸನ್ಸ್ ಪಡೆದಿದ್ದರು. ಅದಮ್ಯ ಉತ್ಸಾಹ, ಸಾಹಸ ಪ್ರವೃತ್ತಿ ಇದೀಗ ಆಕೆಯ ಕನಸು ನನಸು ಮಾಡಿದೆ. ವರ್ಲಿ ವ್ಯಾಪಾರಿಯೊಬ್ಬಳ ಮಗಳಾದ ಆಯೆಷಾ ಕಠಿಣ ಪರಿಶ್ರಮದಿಂದ ಈ ಹಂತಕ್ಕೇರಿದ್ದಾರೆ. "ಮೊದಲ ಬಾರಿಗೆ ನನ್ನ ತಂದೆ- ತಾಯಿಯನ್ನು ವಿಮಾನದಲ್ಲಿ ಕೂರಿಸಿಕೊಂಡು ವಿಮಾನ ಚಾಲನೆ ಮಾಡಲು ಆರಂಭಿಸಿದಾಗ, ನನಗೆ ಸಂಪೂರ್ಣ ಸ್ವಾತಂತ್ರ್ಯದ ಅಪೂರ್ವ ಅನುಭವ ದೊರಕಿದೆ" ಎಂದು ರೋಮಾಂಚನದಿಂದ ನುಡಿದರು. ಕಳೆದ ವರ್ಷ ಮುಂಬೈ ಫ್ಲೈಯಿಂಗ್ ಕ್ಲಬ್‌ನಿಂದ ಅವರು ಕಳೆದ ವರ್ಷ ಪದವಿ ಪಡೆದಿದ್ದರು. ತರಬೇತಿಯಲ್ಲಿ ಒಂದು ಎಂಜಿನ್‌ನ ವಿಮಾನವನ್ನು 200 ಗಂಟೆ ಕಾಲ ಅವರು ಚಲಾಯಿಸಿದ್ದಾರೆ.
ಇದಕ್ಕೆ ತಂದೆಯ ಪ್ರೋತ್ಸಾಹವೇ ಕಾರಣ ಎನ್ನುವುದು ಅವರ ಸ್ಪಷ್ಟ ನುಡಿ. "ಜ್ಞಾನ ಹಾಗೂ ವಿಚಾರಣಾ ಮನೋಭಾವ ಮಾನವ ಪ್ರಗತಿಗೆ ದಾರಿ ಎನ್ನುವುದು ನನ್ನ ಅಭಿಪ್ರಾಯ. ನನ್ನ ಮಗಳು ಸಾಧಿಸಬಹುದಾದ ಕನಸು ಹೊಂದಿದ್ದಾಗ, ಅದನ್ನು ನನಸಾಗಿಸುವ ನಿಟ್ಟಿನಲ್ಲಿ ಸಹಕರಿಸುವುದು ನನ್ನ ಕರ್ತವ್ಯ" ಎಂದು ಅಝೀಝ್ ಹೇಳುತ್ತಾರೆ.
ಮಗುವಾಗಿದ್ದಾಗ ತಾಯಿಯ ಜತೆ ಕಾಶ್ಮೀರಕ್ಕೆ ವಿಮಾನದಲ್ಲಿ ಹೋಗುತ್ತಿದ್ದ ಆಯೆಷಾ, ಪೈಲಟ್ ವೃತ್ತಿ ಬಗ್ಗೆ ಆಕರ್ಷಿತರಾಗಿದ್ದರು. ಬಳಿಕ ಈ ಅದಮ್ಯ ಆಸಕ್ತಿ ಇವರನ್ನು ಮುಂಬೈ ಫ್ಲೈಯಿಂಗ್ ಕ್ಲಬ್‌ನತ್ತ ಕರೆದೊಯ್ದಿತು. ಕಠಿಣ ಪರಿಶ್ರಮ ಬಳಿಕ ಇದೀಗ ಅವರ ಕನಸು ನನಸಾಗಿದೆ.







