ಆಧಾರ್‌ಗೆ ಸಂಪರ್ಕಿಸದ ಪಾನ್‌ಕಾರ್ಡ್ ಗಳು ರದ್ದು?

ಹೊಸದಿಲ್ಲಿ, ಮಾ.23: ಹನ್ನೆರಡು ಅಂಕಿಯ ಬಯೋಮೆಟ್ರಿಕ್ ಗುರುತು ಯೋಜನೆಯ ವಿಸ್ತೃತತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದ್ದು, ಆಧಾರ್ ಕಾರ್ಡ್‌ಗಳಿಗೆ ಸಂಪರ್ಕಿಸದ ಎಲ್ಲ ಪಾನ್‌ಕಾರ್ಡ್‌ಗಳು ಈ ವರ್ಷದ ಡಿಸೆಂಬರ್ 31ರ ಬಳಿಕ ರದ್ದಾಗುವ ಸಾಧ್ಯತೆ ಇದೆ ಎಂದು ಸರ್ಕಾರದ ಉನ್ನತ ಮೂಲಗಳು ಹೇಳಿವೆ.
ಪ್ರಸ್ತುತ ಎಲ್ಲ ತೆರಿಗೆ ಪಾವತಿದಾರರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಪಾನ್ ಸಂಖ್ಯೆ ನಮೂದಿಸುವುದು ಕಡ್ಡಾಯ. ಆದರೆ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ವರ್ಗದವರು ಇದನ್ನು ಗುರುತಿನ ಚೀಟಿಯಾಗಿ ಬಳಸುತ್ತಿದ್ದಾರೆ.
ಆದರೆ ಹಲವು ಪಾನ್‌ಕಾರ್ಡ್‌ಗಳನ್ನು ಅಕ್ರಮವಾಗಿ ಪಡೆಯಲಾಗಿದ್ದು, ಇದನ್ನು ಆಧಾರ್ ಸಂಖ್ಯೆಯನ್ನು ಕಡ್ಡಾಯಪಡಿಸುವ ಮೂಲಕ ತಡೆಯಬಹುದಾಗಿದೆ ಎನ್ನುವುದು ಸರ್ಕಾರದ ಲೆಕ್ಕಾಚಾರ.
ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರ ಹೇಳಿಕೆ ಪ್ರಕಾರ, "ಡಿಸೆಂಬರ್ 31ರ ಗಡುವನ್ನು ಸರ್ಕಾರ ಇರಿಸಿಕೊಂಡಿದೆ. ಈ ವರ್ಷದ ಕೊನೆಯ ಒಳಗಾಗಿ ಆಧಾರ್ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಆ ಗಡುವನ್ನು ಇಟ್ಟುಕೊಳ್ಳಲಾಗಿದೆ"
"ಶೇಕಡ 98ರಷ್ಟು ಮಂದಿ ಆಧಾರ್ ಕಾರ್ಡ್ ಹೊಂದಿದ್ದು, ಈ ವರ್ಷದ ಕೊನೆಯವರೆಗೆ ಅವಕಾಶ ನೀಡಿರುವುದರಿಂದ ಆಧಾರ್ ಸಂಖ್ಯೆಯನ್ನು ಪಾನ್‌ಕಾರ್ಡ್ ಜತೆ ಸಂಪರ್ಕಿಸಲು ಕಾಲಾವಕಾಶವಿದೆ" ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಆರ್ಥಿಕ ಸಲಹೆಗಾರ ಸೌಮ್ಯ ಕಾಂತಿ ಘೋಷ್ ಹೇಳಿದ್ದಾರೆ. ದೇಶದಲ್ಲಿ ಈಗಾಗಲೇ 1.08 ಕೋಟಿ ಮಂದಿ ಆಧಾರ್ ಕಾರ್ಡ್ ಹೊಂದಿದ್ದಾರೆ.







