ಋಷಿ ಮುನಿಗಳು ವೈಜ್ಞಾನಿಕ ಸಂಶೋಧನೆ ಮಾಡಿದ್ದಾರೆ ಎನ್ನುವುದು ದೇಶಕ್ಕೆ ಅಗೌರವ : ನೊಬೆಲ್ ಪುರಸ್ಕೃತ ರಾಮಕೃಷ್ಣನ್

ಹೊಸದಿಲ್ಲಿ,ಮಾ.24 : ವಿಜ್ಞಾನ ಕ್ಷೇತ್ರಕ್ಕೆ ಭಾರತದ ಪ್ರಾಚೀನ ಋಷಿಮುನಿಗಳ ಕೊಡುಗೆಯನ್ನು ಹಾಡಿ ಹೊಗಳುವ ವಡೋದರಾದ ಮಹಾರಾಜ ಸಯ್ಯಾಜಿ ರಾವ್ ವಿಶ್ವವಿದ್ಯಾಲಯ ಡೈರಿಯನ್ನು ಟೀಕಿಸಿರುವ ಅದರ ಹಳೆ ವಿದ್ಯಾರ್ಥಿ ಹಾಗೂ ನೊಬೆಲ್ ಪ್ರಶಸ್ತಿ ವಿಜೇತ ವೆಂಕಟ್ರಾಮನ್ ರಾಮಕೃಷ್ಣನ್, ಈ ರೀತಿಯ ವರ್ಣನೆ ವಿಶ್ವವಿದ್ಯಾನಿಲಯ ಮತ್ತು ದೇಶಕ್ಕೆ ಅಗೌರವ ತರುತ್ತದೆ ಎಂದು ಹೇಳಿದ್ದಾರಲ್ಲದೆ ತನ್ನ ಡೈರಿಯನ್ನು ವಿಶ್ವವಿದ್ಯಾನಿಲಯ ಮರುಮುದ್ರಿಸಬೇಕೆಂದೂ ಹೇಳಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ವಿಶ್ವವಿದ್ಯಾನಿಲಯದ ಡೈರಿಯಲ್ಲಿ ರಾಕೆಟ್ ನಿಂದ ಹಿಡಿದು ವಿಮಾನಗಳ ತನಕ ಹಾಗೂ ಕಾಸ್ಮೆಟಿಕ್ ಸರ್ಜರಿಯಲ್ಲೂ ಸಾಧನೆ ತೋರಿದ ಒಂಬತ್ತು ಮಂದಿ ಋಷಿ ಮುನಿಗಳ ಕೊಡುಗೆ ಕೊಂಡಾಡಲಾಗಿತ್ತು.
ಈ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಇಮೇಲ್ ಒಂದನ್ನು ಕಳುಹಿಸಿ ಪ್ರತಿಕ್ರಿಯಿಸಿರುವ ರಾಮಕೃಷ್ಣನ್ ‘‘ಭಾರತ ಹಿಂದೆ ಅತಿ ದೊಡ್ಡ ಆವಿಷ್ಕಾರಗಳನ್ನು ಮಾಡಿದೆ. ಅವುಗಳಲ್ಲಿ ಸೊನ್ನೆಯಿಂದ ಹಿಡಿದು ಪೊಸಿಶನಲ್ ನಂಬರ್ ಸಿಸ್ಟಂ ಕೂಡ ಮಹತ್ವದ್ದು. ಇದು ಗಣಿತದಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿತು. ಅಂತೆಯೇ 20ನೇ ಶತಮಾನದಲ್ಲಿ ಪ್ರಮುಖರಾದ ಸಿ ವಿ ರಾಮನ್, ಎಸ್ ಎನ್ ಬೋಸ್, ಜೆ ಸಿ ಬೋಸ್ ಹಾಗೂ ಮೇಘನಾದ್ ಸಾಹ ಕೂಡ ಬಹಳಷ್ಟು ಸಾಧನೆ ಮಾಡಿದ್ದಾರೆ. ಇಂತಹ ವಾಸ್ತವಿಕ ಸಾಧನೆಗಳ ಬಗ್ಗೆ ಬೆಳಕು ಚೆಲ್ಲುವ ಬದಲು ಪ್ರಾಚೀನ ಧಾರ್ಮಿಕ ಗ್ರಂಥಗಳನ್ನು ಆಧರಿಸಿ ಋಷಿಮುನಿಗಳ ಕೊಡುಗೆಯಯನ್ನು ಹೊಗಳಿದ್ದು ಸರಿಯಲ್ಲ. ಇವುಗಳನ್ನು ಹೊರತುಪಡಿಸಿ ಡೈರಿಯನ್ನು ಮರುಮುದ್ರಿಸಬೇಕು’ ಎಂದು ಬರೆದಿದ್ದಾರೆ.







