ಅಂತಿಂಥ ಅಟೋ ಚಾಲಕ ಇವರಲ್ಲ !

ಮಂಗಳೂರು, ಮಾ.24: 'ಗರ್ಭಿಣಿಯರ ಹೆರಿಗೆಗೆ ಆಸ್ಪತ್ರೆಗೆ ಸೇರಿಸಲು, ಅಪಘಾತದ ಸಂದರ್ಭ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲು, ಎರಡೂ ಕಣ್ಣುಗಳು ಕಾಣದವರಿಗೆ ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಉಚಿತ ಸೇವೆ'. ಇದು ಆಕಾಶಭವನ ನಿವಾಸಿ, ಆಟೋ ಚಾಲಕ ಕೆ. ಮುಹಮ್ಮದ್‌ರವರ ಆಟೋರಿಕ್ಷಾದ ಹಿಂಬದಿಯಲ್ಲಿ ಕಂಡು ಬರುವ ಬರಹ.
ಸಮಾಜ ಸೇವೆಯ ಪರಿಕಲ್ಪನೆ ವಿಶಾಲವಾದುದು. ಇನ್ನೊಬ್ಬರಿಗೆ ಸಹಕಾರಿಯಾಗುವ ಮೂಲಕವೂ ಸೇವೆಯನ್ನು ಮಾಡಬಹುದು ಎಂಬುದನ್ನು ಮುಹಮ್ಮದ್‌ರವರು ತಮ್ಮ ಕಾಯಕದ ಜತೆಗೆ ಮಾಡುತ್ತಿದ್ದಾರೆ.
ಕೊಟ್ಟಾರ ಜಂಕ್ಷನ್ ಹಾಗೂ ಕೇಂದ್ರ ಮಾರುಕಟ್ಟೆ ಬಳಿ ಆಟೋ ಚಾಲಕರಾಗಿ ದುಡಿಯುವ ಇವರು ತಮ್ಮ ಕರ್ತವ್ಯದ ವೇಳೆ ತುರ್ತು ಸಂದರ್ಭಗಳಲ್ಲಿ ಉಚಿತ ಸೇವೆಯನ್ನು ನೀಡಲು ಸಿದ್ಧರಿರುತ್ತಾರೆ.
ಕಳೆದ 33 ವರ್ಷಗಳಿಂದ ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದೇನೆ. ನನ್ನ ದುಡಿಮೆಯ ವೇಳೆಯಲ್ಲಿ ಜನರಿಗೆ ನೆರವಾಗುವ ಕೆಲಸವನ್ನು ಮಾಡೋಣ ಎಂಬ ಕಾರಣಕ್ಕೆ ನನ್ನ ಆಟೋ ರಿಕ್ಷಾದಲ್ಲಿ ಈ ಬರಹಗಳನ್ನು ಹಾಕಿಕೊಂಡಿದ್ದೇನೆ. ಕಳೆದ ಎರಡು ವರ್ಷಗಳಿಂದ ನನ್ನಿಂದಾದ ಸಹಾಯವನೂ ಮಾಡುತ್ತಿದ್ದೇನೆ. ರಸ್ತೆ ಅಪಘಾತಕ್ಕೆ ಸಂಬಂಧಿಸಿ 25ಕ್ಕೂ ಅಧಿಕ ಮಂದಿಯನ್ನು ಉಚಿತವಾಗಿ ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದೇನೆ. ಉಳಿದಂತೆ ಗರ್ಭಿಣಿ ಮಹಿಳೆಯರನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯವನ್ನೂ ನಾನು ಮಾಡುತ್ತೇನೆೞೞಎಂದು ಹೇಳುತ್ತಾರೆ ಕೆ. ಮುಹಮ್ಮದ್.
''ನನ್ನ ವಾಹನದಲ್ಲಿ ನಾನು ನನ್ನ ಈ ಉಚಿತ ಸೇವೆಗೆ ಸಂಪರ್ಕಕ್ಕಾಗಿ ನನ್ನ ಮೊಬೈಲ್ ಸಂಖ್ಯೆಯನ್ನೂ ನಮೂದಿಸಿದ್ದೆ. ಆದರೆ ಹಲವು ಬಾರಿ ಕೆಲವರು ಕರೆ ಮಾಡಿ ಬರಲು ಹೇಳಿ, ಬಳಿಕ ಆ ಜಾಗಕ್ಕೆ ಹೋಗಿ ಕರೆ ಮಾಡಿದಾಗ ಏನೂ ಇರುವುದಿಲ್ಲ. ಬಂದ ಸಂಖ್ಯೆಗೆ ಕರೆ ಮಾಡಿದರೆ ಸ್ವಿಚ್ ಆಫ್ ಆಗಿರುತ್ತದೆ. ಈ ಕಾರಣಕ್ಕೆ ಸದ್ಯ ರಿಕ್ಷಾದಲ್ಲಿ ಹಾಕಿದ್ದ ಮೊಬೈಲ್ ಸಂಖ್ಯೆಯನ್ನು ತೆಗೆದಿದ್ದೇನೆ. ಇದೀಗ ನನ್ನ ಸ್ನೇಹಿತರು ಅಥವಾ ಪರಿಚಯದವರು ಕರೆ ಮಾಡಿ ತುರ್ತು ಸಂದರ್ಭಗಳಲ್ಲಿ ಕರೆದಾಗ ತಕ್ಷಣ ಸ್ಪಂದಿಸುತ್ತೇನೆ'' ಎನ್ನುತ್ತಾರೆ ಕೆ. ಮುಹಮ್ಮದ್.
ರಸ್ತೆ ಅಪಘಾತದ ವೇಳೆ ಸಂಕಷ್ಟದಲ್ಲಿರುವವರಿಗೆ ಸಹಕರಿಸುವ ಬದಲು ಮೊಬೈಲ್‌ಗಳಲ್ಲಿ ಫೋಟೋ ಕ್ಲಿಕ್ಕಿಸುವಲ್ಲಿಯೇ ಬಹುತೇಕರು ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ತುರ್ತು ಸಂದರ್ಭಗಳಲ್ಲಿ ಇನ್ನೊಬ್ಬರ ಪ್ರಾಣ ರಕ್ಷಣೆಯೇ ಪ್ರಮುಖವಾಗಿರಬೇಕು ಎನ್ನುವುದು ಮುಹಮ್ಮದ್‌ರವರ ಅಭಿಪ್ರಾಯ.







