ಸಂಸದರ ಪಿಂಚಣಿ ನಿರ್ಧರಿಸುವುದು ಸಂಸತ್‌ನ ಹಕ್ಕು: ಅನಂತಕುಮಾರ್
ಹಸ್ತಕ್ಷೇಪ ನಡೆಸದಂತೆ ಸುಪ್ರೀಂಗೆ ಕೇಂದ್ರದ ಸಂದೇಶ

ಹೊಸದಿಲ್ಲಿ,ಮಾ.24: ಸಂಸದರಿಗೆ ಪಿಂಚಣಿ ನೀಡಿಕೆ ಬಗ್ಗೆ ಸುಪ್ರೀಂಕೋರ್ಟ್ ಆಕ್ಷೇಪ ವ್ಯಕ್ತಪಡಿಸಿರುವುದಕ್ಕೆ ಶುಕ್ರವಾರ ಕೇಂದ್ರ ಸರಕಾರ ಕಟುವಾದ ಪ್ರತಿಕ್ರಿಯೆ ನೀಡಿದ್ದು, ಪಿಂಚಣಿ ವಿಷಯದ ಬಗ್ಗೆ ನಿರ್ಧರಿಸುವುದು ಸಂಸತ್‌ನ ಹಕ್ಕಾಗಿದೆ ಎಂದು ಹೇಳಿದೆ. ಆ ಮೂಲಕ ಸಂಸತ್‌ನ ವಿಷಯದಲ್ಲಿ ಮೂಗು ತೂರಿಸದಂತೆ ಸರ್ವೋಚ್ಛ ನ್ಯಾಯಾಲಯಕ್ಕೆ ಪರೋಕ್ಷವಾದ ಸಂದೇಶವನ್ನು ನೀಡಿದೆ.
ಸಂಸದರಿಗೆ ಪಿಂಚಣಿ ಹಾಗೂ ಭತ್ತೆಗಳನ್ನು ಕಾನೂನಿನ ನಿಯಮದ ಪ್ರಕಾರ ನೀಡಲಾಗುತ್ತಿದೆ ಹಾಗೂ ಈ ವಿಷಯವು ಸಂಸತ್‌ನ ವ್ಯಾಪ್ತಿಗೆ ಸೇರಿದ್ದಾಗಿದೆಯೆಂದು ಸಂಸದೀಯ ವ್ಯವಹಾರಗಳ ಸಚಿವ ಆನಂತ್ ಕುಮಾರ್ ಇಂದು ಲೋಕಸಭೆಗೆ ತಿಳಿಸಿದರು.
‘‘ಸದನದ ಹಕ್ಕುಗಳು ಪರಮಪವಿತ್ರವಾದುದೆಂದು ಸದನದ ಪ್ರತಿಯೊಬ್ಬ ಸದಸ್ಯರೂ ಒಪ್ಪಿಕೊಳ್ಳುತ್ತಾರೆ. ಸಂಸದರ ವೇತನ ಹಾಗೂ ಭತ್ತೆಗಳ ಬಗ್ಗೆ ನಿರ್ಧಾರಗಳನ್ನು ಕೈಗೊಳ್ಳುವ ಹಕ್ಕು ಸಂಸತ್‌ಗಿದೆಯೆಂಬುದನ್ನು ಸದನದ ಪ್ರತಿಯೊಬ್ಬ ಸದಸ್ಯನೂ ಒಪ್ಪಿಕೊಳ್ಳುತ್ತಾನೆಂದು ನಾನು ಭಾವಿಸುತ್ತೇನೆ’’ ಎಂದವರು ಹೇಳಿದ್ದಾರೆ.
ಆನಂತರ ಅವರು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರನ್ನುದ್ದೇಶಿಸಿ ಮಾತನಾಡುತ್ತಾ, ಈ ವಿಷಯದಲ್ಲಿ ಇಡೀ ಸದನ ನಿಮ್ಮಾಂದಿಗಿದೆ ಎಂದು ಹೇಳಿದರು. ಶೇ. 80ರಷ್ಟು ಸಂಸತ್ ಸದಸ್ಯರು ಕೋಟ್ಯಾಧಿಪತಿಗಳಾಗಿದ್ದು, ಅವರಿಗೆ ಪಿಂಚಣಿ ನೀಡಿಕೆಯು ಅತಾರ್ಕಿಕವಾದುದು ಎಂದು ಸುಪ್ರೀಂಕೋರ್ಟ್ ಗುರುವಾರ ಅಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆನಂತ್ ಕುಮಾರ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ತೃಣಮೂಲ ಕಾಂಗ್ರೆಸ್ ಸಂಸದ ಸುಗತಾ ರಾಯ್ ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸುತ್ತಾ, ಸುಪ್ರೀಂಕೋರ್ಟ್ ತನ್ನ ಹಕ್ಕುಗಳ ದಾಟಿ ಹೋಗುತ್ತಿದೆಯೆಂದು ದೂರಿದ್ದರು. ಸುಪ್ರೀಂಕೋರ್ಟ ನ್ಯಾಯಾಧೀಶರಿಗೆ ಪಿಂಚಣಿ ಯಾಕೆ ನೀಡಬೇಕೆಂದು ನಾವು ಕೇಳುತ್ತಿಲ್ಲ ಎಂದು ಕಟಕಿಯಾಡಿದ ಅವರು ಈ ವಿಷಯದ ಬಗ್ಗೆ ನಾವು ನಿಲುವೊಂದನ್ನು ತಳೆಯಬೇಕಾಗಿದೆ’’ ಎಂದರು.
ಸಂಸತ್ ಸದಸ್ಯರಿಗೆ ನೀಡಲಾಗುತ್ತಿರುವ ಪಿಂಚಣಿ ಹಾಗೂ ಭತ್ತೆಗಳು ಅತಾರ್ಕಿಕವೆಂದು ಮಂಗಳವಾರ ಅಭಿಪ್ರಾಯಿಸಿದ್ದ ಸುಪ್ರೀಂಕೋರ್ಟ್ ಕೇಂದ್ರ ಸರಕಾರ ಹಾಗೂ ಚುನಾವಣಾ ಆಯೋಗದ ಅಭಿಪ್ರಾಯವನ್ನು ಕೋರಿತ್ತು. ಸಂಸತ್ ಸದಸ್ಯರಿಗೆ ನೀಡಲಾಗುತ್ತಿರುವ ಪಿಂಚಣಿ ಹಾಗೂ ಇತರ ಭತ್ತೆಗಳನ್ನು ರದ್ದುಪಡಿಸಬೇಕೆಂದು ಕೋರಿ ಸಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ಅದು ಈ ಅನಿಸಿಕೆಯನ್ನು ವ್ಯಕ್ತಪಡಿಸಿತ್ತು.