ಮಂಗಳೂರು: ಅಪ್ರಾಪ್ತೆ ವಿದ್ಯಾರ್ಥಿನಿಯನ್ನು ಗರ್ಭವತಿಯನ್ನಾಗಿಸಿದ ಕ್ಯಾಮರಾಮೆನ್
ಪೋಕ್ಸೋ ಕಾಯ್ದೆಯಡಿ ಆರೋಪಿಯ ಬಂಧನ

ಕೊಣಾಜೆ, ಮಾ.24: ಅಪ್ರಾಪ್ತೆ ವಿದ್ಯಾರ್ಥಿನಿಯೋರ್ವಳ ಸ್ನೇಹ ಬೆಳೆಸಿ ಮದುವೆಯಾಗುತ್ತೇನೆಂದು ನಂಬಿಸಿ ನಿರಂತರ ಅತ್ಯಾಚಾರವೆಸಗಿ ಗರ್ಭಿಣಿಯನ್ನಾಗಿಸಿದ ಖಾಸಗಿ ಚಾನೆಲೊಂದರ ಕ್ಯಾಮರಾಮೆನ್‌ನೊರ್ವನನ್ನು ಮಕ್ಕಳ ಕಲ್ಯಾಣ ಸಮಿತಿಯ ಸಲಹೆಯಂತೆ ಸಂತ್ರಸ್ತೆ ನೀಡಿದ ದೂರಿನನ್ವಯ ಕೊಣಾಜೆ ಪೊಲೀಸರು ಬಂಧಿಸಿ ಪೋಕ್ಸೊ ಕಾಯ್ದೆಯಡಿ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಕೊಣಾಜೆಯಲ್ಲಿ ವಾಸವಾಗಿದ್ದ ಅನೂಪ್ ಜೋಗಿ(26) ಎಂದು ಗುರುತಿಸಲಾಗಿದೆ. ಆರೋಪಿ ಅನೂಪ್ ಕಳೆದ ವರ್ಷದ ಎಪ್ರಿಲ್ ತಿಂಗಳಲ್ಲಿ ಸಾಲೆತ್ತೂರಿನಲ್ಲಿ ಕಾರ್ಯಕ್ರಮಕ್ಕೆಂದು ತೆರಳಿದ್ದ ವೇಳೆ ಪಜೀರು ಸಮೀಪದ ವಿದ್ಯಾರ್ಥಿನಿಯ ಪರಿಚಯವಾಗಿತ್ತು. ಬಳಿಕ ಆಕೆಯ ಜೊತೆ ಸಲುಗೆ ಬೆಳೆಸಿದ ಆತ ವಿದ್ಯಾರ್ಥಿನಿಯು ವಾಸವಿದ್ದ ಮನೆಗೆ ತೆರಳಿ ಮದುವೆಯಾಗುತ್ತೇನೆಂದು ನಂಬಿಸಿ ಆಕೆಯೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಗರ್ಭಿಣಿಯನ್ನಾಗಿಸಿದ್ದ.
ಈ ಬಗ್ಗೆ ತಾನು ಸೆಪ್ಟೆಂಬರ್ ತಿಂಗಳಲ್ಲೇ ಅನೂಪ್‌ನಲ್ಲಿ ತಿಳಿಸಿದ್ದು ಬಸುರಿನ ವಿಚಾರ ಯಾರಲ್ಲಾದರೂ ತಿಳಿಸಿದರೆ ಕೊಲ್ಲುವುದಾಗಿ ಜೀವಬೆದರಿಕೆ ಹಾಕಿದ್ದನೆಂದು ಸಂತ್ರಸ್ತೆ ಒಂಭತ್ತನೇ ತರಗತಿ ಕಲಿಯುತ್ತಿದ್ದ ವಿದ್ಯಾರ್ಥಿನಿ ಗುರುವಾರ ಸಂಜೆ ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾಳೆ.
ವಿದ್ಯಾರ್ಥಿನಿಯ ದೂರು ಸ್ವೀಕರಿಸಿದ ಪೊಲೀಸರು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಆಕೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದು, ವೈದ್ಯಕೀಯ ವರದಿಯನ್ವಯ ಆರೋಪಿ ಅನೂಪ್‌ನನ್ನು ಶುಕ್ರವಾರ ಬಂಧಸಿ ಆತನ ವಿರುದ್ಧ 506(ಐಪಿಸಿ) 376(ಐ) 5(ಜೆ2)6ಪೋಕ್ಸೋ 2012 ಪ್ರಕರಣಗಳನ್ನು ದಾಖಲಿಸಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿ ಅನೂಪ್ ಕಳೆದ ಕೆಲವು ತಿಂಗಳ ಹಿಂದೆ ಉಳ್ಳಾಲ ವ್ಯಾಪ್ತಿಯಲ್ಲಿ ಕ್ಯಾಮಾರಮೆನ್ ಆಗಿ ಕಾರ್ಯನಿರ್ವಹಿಸಿ ಬಳಿಕ ಬೆಂಗಳೂರಿನಲ್ಲಿ ಚಾನೆಲೊಂದರಲ್ಲಿ ಕ್ಯಾಮರಾಮೆನ್ ಆಗಿ ಕಾರ್ಯನಿರ್ವಹಿಸುತ್ತಿದ್ದ.







