ಮಂಗಳೂರು: ರೌಡಿ ಶೀಟರ್ ನೌಫಲ್ ಬಂಧನ

ಮಂಗಳೂರು, ಮಾ. 24: ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಜಾಮೀನು ಮೇಲೆ ಬಿಡುಗಡೆಗೊಂಡು ನಾಪತ್ತೆಯಾಗಿದ್ದ ರೌಡಿಶೀಟರ್‌ಯೊಬ್ಬನನ್ನು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತನ ಸಹಚರ ಪರಾರಿಯಾಗಿದ್ದಾನೆ.
ಬಂಧಿತ ಆರೋಪಿಯನ್ನು ಬಜಾಲ್ ಫೈಸಲ್‌ನಗರ ನಿವಾಸಿ ನೌಫಲ್ ಯಾನೆ ನೌಫು (30) ಎಂದು ಗುರುತಿಸಲಾಗಿದ್ದು, ಈತನ ಸಹಚರ ಎನ್ನಲಾದ ನಟೋರಿಯಸ್, ಫೈಸಲ್‌ನಗರ ನಿವಾಸಿ ರೌಡಿಶೀಟರ್ ತಲ್ಹತ್ (35) ತಪ್ಪಿಸಿಕೊಂಡಿದ್ದಾನೆ.
ನೌಫಲ್ ವಿರುದ್ಧ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಕಣ್ಣೂರು ಪುಟ್ಟ ಎಂಬಾತನ ಕೊಲೆ ಪ್ರಕರಣ ಸೇರಿದಂತೆ 2 ಕೊಲೆ ಯತ್ನ ಪ್ರಕರಣ, 1 ದರೋಡೆ ಪ್ರಕರಣ, 1 ಹಲ್ಲೆ ಪ್ರಕರಣ ದಾಖಲಾಗಿದ್ದವು. ಇದಲ್ಲದೆ, ಈತನ ವಿರುದ್ಧ ಪಾಂಡೇಶ್ವರ, ಬರ್ಕೆ, ಬಂದರು ಠಾಣೆಗಳಲ್ಲಿ ಹಲವು ಪ್ರಕರಣಗಳಿವೆ. ಕುಕೃತ್ಯಗಳಲ್ಲಿ ಭಾಗಿಯಾಗಿದ್ದ ಈತನ ಮೇಲೆ ರೌಡಿಶೀಟರ್ ಹಾಕಲಾಗಿತ್ತು. ಕೋರ್ಟ್ ಜಾಮೀನು ಮೇಲೆ ಬಿಡುಗಡೆಗೊಂಡಿದ್ದ ಈತ 3 ವರ್ಷದಿಂದ ಪೊಲೀಸರಿಂದ ತಲೆಮರೆಸಿಕೊಂಡಿದ್ದ. ಕೋರ್ಟ್ ಈತನ ವಿರುದ್ಧ ವಾರಂಟ್ ಕೂಡಾ ಹೊರಡಿಸಿದ್ದು, ಅದರಂತೆ ಪೊಲೀಸರು ಶೋಧ ಕಾರ್ಯವನ್ನು ಮುಂದುವರಿಸಿದ್ದರು.
ನೌಫಲ್ ಕೆಲವು ತಿಂಗಳ ಹಿಂದೆ ಮನೆಗೆ ಬಂದಿದ್ದು, ಫೆ.6ರಂದು ಗೌಪ್ಯವಾಗಿ ಮದುವೆಯಾಗಿದ್ದ. ಈ ಬಗ್ಗೆ ಮಾಹಿತಿ ಪಡೆದುಕೊಂಡ ಪೊಲೀಸರು ವೇಷ ಮರೆಸಿಕೊಂಡು ಹೋಗಿ ಆರೋಪಿಯನ್ನು ಬಂಧಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಚಂದ್ರಶೇಖರ್ ನಿರ್ದೇಶನದಂತೆ ಡಿಸಿಪಿಗಳಾದ ಶಾಂತರಾಜು, ಸಂಜೀವ್ ಪಾಟೀಲ್, ಎಸಿಪಿ ಶೃತಿ ಮಾರ್ಗದರ್ಶನದಲ್ಲಿ ಕಂಕನಾಡಿ ಗ್ರಾಮಾಂತರ ಠಾಣಾ ಇನ್‌ಸ್ಪೆಕ್ಟರ್ ಮುಹಮ್ಮದ್ ಶರೀಫ್ ರಾವುತ್, ಪಿಎಸ್‌ಐ ವೆಂಕಟೇಶ್, ಎಎಸ್‌ಐ ಚಂದ್ರಶೇಖರ್ ಆಚಾರ್ಯ, ಎಎಸ್‌ಐ ಶ್ರೀಧರ್ ಮತ್ತು ಕಾನ್‌ಸ್ಟೇಬಲ್ ಪ್ರವೀಣ್, ಮಾರುತಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.







