ಗದಗ: ಜಾನುವಾರುಗಳ ಸರಣಿ ಸಾವು...
.jpg)
ಗದಗ, ಮಾ.24: ಜಿಲ್ಲೆಯಲ್ಲಿ ಭೀಕರ ಬರಗಾಲ ತಾಂಡವಾಡುತ್ತಿರುವ ಸಮಯದಲ್ಲಿ ಅನ್ನ, ನೀರಿಗೂ ಪರಿತಪಿಸುವಂತ ಪರಿಸ್ಥಿತಿ ಎದುರಾಗಿದೆ. ಇಂತಹ ಸಮಯದಲ್ಲಿ ಸರಕಾರ ಗೋವುಗಳ ರಕ್ಷಣೆಗೆಂದು ಗೋ ಶಾಲೆ ತೆರೆದಿದೆ. ಆದರೆ ಅಧಿಕಾರಿಗಳ ನಿರ್ಲಕ್ಷವೊ ಅಥವಾ ಬಿಸಿಲಿನ ತಾಪಕ್ಕೊ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗೋ ಶಾಲೆಯಲ್ಲಿ ಕರುಗಳ ಸಾವಿನ ಸರಣಿ ದಿನದಿಂದ ದಿನಕ್ಕೆ ನಡೆಯುತ್ತಲೆ ಇದೆ.
ನಿನ್ನೆಯಷ್ಟೆ ಡಂಬಳ ಗ್ರಾಮದ ಮಲ್ಲಪ್ಪ ಮಾಳಪ್ಪನವರಮಠ ಅವರಿಗೆ ಸೇರಿದ 2 ಕರುಗಳು ಸಾವನಪ್ಪಿದ್ದವು. ಸಾವನ್ನಪ್ಪಿದ ಕರುಗಳ ಮರಣೋತ್ತರ ಪರೀಕ್ಷೆ ಮಾಡಿಸದೇ, ಸತ್ತ ಕರುಗಳನ್ನು ಹೊರಗಡೆ ಒಯ್ಯುವಂತೆ ಒತ್ತಾಯ ಪೂರ್ವಕವಾಗಿ ಅಧಿಕಾರಿಗಳು ಒತ್ತಡ ಹೇರಿದ್ದರೆಂದು ಕರುಗಳ ಮಾಲಕ ಮಲ್ಲಪ್ಪ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದರು. ನಿನ್ನೆಯ ಗಾಯ ಮಾಸುವುದೊರಳಗಾಗಿ ಇಂದು ಅದೇ ಗೋ ಶಾಲೆಯಲ್ಲಿ ಅದೇ ಮಾಲಕನ ಮತ್ತೊಂದು ಕರು ಸಾವನ್ನಪ್ಪಿದೆ.
ಗೋಶಾಲೆ ಸಿಬ್ಬಂದಿಯ ನಿರ್ಲಕ್ಷ್ಯವೇ ಇಂದು ಮತ್ತೊಂದು ಕರು ಸಾವನ್ನಪ್ಪಲು ಕಾರಣ. ಅಷ್ಟೆ ಅಲ್ಲ ಗೋ ಶಾಲೆಯಲ್ಲಿ ಗೋವುಗಳಿಗೆ ಸೂಕ್ತ ಚಿಕಿತ್ಸೆ, ವ್ಯವಸ್ಥೆ ಇಲ್ಲದಕ್ಕೆ ಮೂಕ ಪ್ರಾಣಿಗಳ ಸಾವಿನ ಸರಣಿ ಸಂಭವಿಸುತ್ತಿದ್ದು, ಈ ಬಗ್ಗೆ ಜಿಲ್ಲಾಡಳಿತ ಸಹ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಮಲ್ಲಪ್ಪ ತಮ್ಮ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾನೆ.
ಒಟ್ಟಿನಲ್ಲಿ ಬರದ ಬವಣೆಯಲ್ಲಿ ಸಾವು ಬದುಕಿನ ಮಧ್ಯೆ ಬದುಕುತ್ತಿರುವ ರೈತ, ತನಗಾದ ಅನ್ಯಾಯ ಹೇಳಿಕೊಳ್ಳಲು ಸಹ ಭಯ ಪಡುತ್ತಿರುವಂತಹ ವಾತಾವರಣ ಸೃಷ್ಟಿಯಾಗುತ್ತಿದೆ. ಹಾಗಾಗಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸರಕಾರ ಮುಂದಾಗಬೇಕು. ಎನ್ನುವುದು ರೈತರ ಆಗ್ರಹ.







