ಡಾ. ಶಿವಮೂರ್ತಿ ಮುರುಘಾ ಶ್ರೀಗೆ ಬೆದರಿಕೆ ಕರೆ
ಸರ್ವಧರ್ಮ ಸಂತರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

ದುಷ್ಕರ್ಮಿಯ ಶೀಘ್ರ ಬಂಧನಕ್ಕೆ ಆಗ್ರಹ
ಮುಖ್ಯಮಂತ್ರಿಗೆ ಮನವಿ
ಚಿತ್ರದುರ್ಗ, ಮಾ.24: ಡಾ. ಶಿವಮೂರ್ತಿ ಮುರುಘಾ ಶರಣರಿಗೆ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿರುವುದನ್ನು ಖಂಡಿಸಿ ಮತ್ತು ಕೂಡಲೇ ದುಷ್ಕರ್ಮಿಯನ್ನು ಬಂಧಿಸುವಂತೆ ಒತ್ತಾಯಿಸಿ ನಗರದಲ್ಲಿ ಶುಕ್ರವಾರ ಸರ್ವಧರ್ಮ ಸಂತರ ನೇತೃತ್ವದಲ್ಲಿ ರಾಜ್ಯದ ವಿವಿಧ ಬಸವ ಕೇಂದ್ರಗಳು ಮತ್ತು ಸಂಘ-ಸಂಸ್ಥೆಗಳ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಮಠಾಧೀಶರು, ಬಸವಕೇಂದ್ರಗಳು ಮತ್ತು ಸಂಘ-ಸಂಸ್ಥೆಗಳ ಮುಖಂಡರು ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ನೀಲಕಂಠೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯು ಮುಖ್ಯಬೀದಿಯಲ್ಲಿ ಸಂಚರಿಸಿ ನಂತರ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಸೇರಿ, ಜಿಲ್ಲಾಧಿಕಾರಿಯವರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪಾಂಡೋಮಟ್ಟಿಯ ಗುರುಬಸವ ಸ್ವಾಮೀಜಿ, ಇದೊಂದು ಆತಂಕ ಪಡುವ ವಿಚಾರ. ರಾಜ್ಯದಲ್ಲಿ ವೌಢ್ಯತೆಗೆ ಅವಕಾಶ ಕೊಡದೆ, ಸಕಲರಿಗೆ ಸಮಬಾಳು ಸಮಪಾಲು ಎನ್ನುವ ಹಾಗೆ ಸಕಲರಿಗೆ ಅವಕಾಶ ಮಾಡಿಕೊಡುವ ಮೂಲಕ ಲೇಸನ್ನು ಬಯಸುವ ಡಾ. ಶಿವಮೂರ್ತಿ ಮುರುಘಾ ಶರಣರಿಗೆ ದೂರವಾಣಿ ಕರೆ ಮಾಡಿ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದರು.
ಶೋಷಣೆಗೆ ಒಳಗಾಗಿರುವವರಿಗೆ ಬದುಕು ಕಲ್ಪಿಸಿದವರು. ತುಳಿತಕ್ಕೊಳಗಾದವರನ್ನು ಅಪ್ಪಿಕೊಂಡವರು. ಸಮಾಜದ ಅವ್ಯವಸ್ಥೆಯನ್ನು ಸರಿಪಡಿಸುವ ಮೂಲಕ ಬದುಕಿಗೆ ಹೊಸ ಆಯಮ ತಂದುಕೊಡುವ ಮೂಲಕ ನಾಡಿನಲ್ಲಿ ಹೊಸ ಜಾಗೃತಿ ಮೂಡಿಸುತ್ತಿರುವ ಶ್ರೀಗಳ ಪರವಾಗಿ ನಾಡಿನ ಎಲ್ಲ ಪ್ರಗತಿಪರ ಮಠಾಧೀಶರು ನಿಲ್ಲುತ್ತೇವೆ. ವೈಚಾರಿಕ ಪ್ರಜ್ಞೆಗೆ ಮಾರಕವಾಗುವ ರೀತಿಯಲ್ಲಿ ಬೆದರಿಕೆ ಹಾಕಿರುವುದನ್ನು ಖಂಡಿಸುತ್ತೇವೆ. ಬೆದರಿಕೆ ಹಾಕಿರುವ ವ್ಯಕ್ತಿ ಮತ್ತು ಅದರ ಹಿಂದಿರುವವರನ್ನು ಶೀಘ್ರ ಬಂಧಿಸಬೇಕೆಂದು ಒತ್ತಾಯಿಸಿದರು.
ಚಿತ್ರದುರ್ಗ ಚರ್ಚ್‌ನ ಧರ್ಮಗುರುಗಳಾದ ಎಂ.ಎಸ್. ರಾಜು ಮಾತನಾಡಿ, ಇದೊಂದು ಗಂಭೀರ ಸಂದರ್ಭ. ಈ ವಿಚಾರದಲ್ಲಿ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಪೈಗಂಬರ್, ಏಸು, ಬುದ್ಧ, ಬಸವ, ಗಾಂಧೀಜಿ, ಅಂಬೇಡ್ಕರ್ ವಿಚಾರಗಳನ್ನು ಹೊಂದಿರುವ ಮುರುಘಾ ಶರಣರಿಗೆ ಎಲ್ಲ ರೀತಿಯ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಎ.ವಿ.ಉಮಾಪತಿ ಮಾತನಾಡಿ, ಬಸವ ತತ್ವವನ್ನು ಯಥಾವತ್ತಾಗಿ ಪಾಲಿಸುತ್ತಿರುವವರು ಮುರುಘಾ ಶರಣರು ಪ್ರತಿಯೊಬ್ಬರ ಮನ ಮತ್ತು ಮನೆಯಲ್ಲಿ ರಾರಾಜಿಸುತ್ತಿದ್ದಾರೆ. ಇವರಿಗೆ ಬೆದರಿಕೆ ಕರೆ ಬರುತ್ತದೆ ಎಂದರೆ ಈ ಪ್ರಕರಣ ಹಿಂದೆ ಬಲಿಷ್ಠ ಕಾಣದ ಕೈ ಕೆಲಸ ಮಾಡಿರುವ ಶಂಕೆ ಇದೆ. ಪ್ರಕರಣ ಬಯಲಿಗೆಳೆದು ಸಂಬಂಧ ಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬೀದರ್ ಜಿಲ್ಲಾ ಬಸವಕೇಂದ್ರ ಅಧ್ಯಕ್ಷ ಸೋಮನಾಥ್, ತಿಪಟೂರಿನ ಷಡಕ್ಷರ ಮುನಿ ಸ್ವಾಮಿಗಳು, ಕಲಬುರಗಿಯ ಶ್ರೀ ಬಸವ ಕಬೀರ ಸ್ವಾಮೀಜಿ, ಚಿತ್ರದುರ್ಗ ವೀರಶೈವ ಸಮಾಜದ ಮಲ್ಲಿಕಾರ್ಜುನ್ ಜಿ.ಸಿ., ದಾವಣಗೆರೆ ಮಾಜಿ ಶಾಸಕ ಮೋತಿ ವೀರಣ್ಣ, ನಗರಸಭೆ ಮಾಜಿ ಅಧ್ಯಕ್ಷ ಕಾಂತರಾಜ್, ಸಿಂದಗಿ ಬಸವಕೇಂದ್ರದ ನಾನಾಗೌಡ ಪಾಟೀಲ ಮುಂತಾದವರು ಮಾತನಾಡಿದರು.
ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಭಾಗಗಳ ಮಠಾಧೀಶರು, ಬಸವಕೇಂದ್ರ ಪದಾಧಿಕಾರಿಗಳು, ಸಂಘಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.
ಪ್ರತಿಭಟನಾ ಸಭೆಯ ಬಳಿಕ ಶ್ರೀಗಳಿಗೆ ಬೆದರಿಕೆ ಕರೆ ಬಂದಿರುವ ಹಿನ್ನೆಲೆಯಲ್ಲಿ ಮುರುಘಾಮಠದ ರಾಜಾಂಗಣದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರೊಂದಿಗೆ ಸರ್ವ ಮಠಾಧೀಶರ ನೇತೃತ್ವದಲ್ಲಿ ಸಭೆ ನಡೆಯಿತು.







