ದೇವಧರ್ ಟ್ರೋಫಿ: ರೋಹಿತ್ ಶರ್ಮ, ಕೇದಾರ್ ಜಾಧವ್ ಅಲಭ್ಯ
ಮುಂಬೈ, ಮಾ.24: ದೇವಧರ್ ಟ್ರೋಫಿಯಲ್ಲಿ ಇಂಡಿಯಾ ಬ್ಲೂ ತಂಡವನ್ನು ನಾಯಕನಾಗಿ ಮುನ್ನಡೆಸಬೇಕಾಗಿದ್ದ ರೋಹಿತ್ ಶರ್ಮ ಮಂಡಿನೋವಿನಿಂದಾಗಿ ಟೂರ್ನಿಯಿಂದ ಹೊರ ನಡೆದಿದ್ದಾರೆ. ಇಂಡಿಯಾ ರೆಡ್ ತಂಡದ ಬ್ಯಾಟ್ಸ್‌ಮನ್ ಕೇದಾರ್ ಜಾಧವ್ ಕೂಡ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಪಂದ್ಯದಿಂದ ಟೂರ್ನಿಗೆ ಅಲಭ್ಯರಾಗಿದ್ದಾರೆ.
ಅಖಿಲ ಭಾರತ ಆಯ್ಕೆ ಸಮಿತಿ ಗುರುವಾರ(ಮಾ.23) ರೋಹಿತ್ ಬದಲಿಗೆ ಮಹಾರಾಷ್ಟ್ರದ ಋತುರಾಜ್ ಗಾಯಕ್ವಾಡ್‌ರನ್ನು, ಜಾಧವ್ ಬದಲಿಗೆ ಹೈದರಾಬಾದ್‌ನ ಸಿ.ವಿ.ಮಿಲಿಂದ್‌ರನ್ನು ಕ್ರಮವಾಗಿ ಇಂಡಿಯಾ ಬ್ಲೂ ಹಾಗೂ ರೆಡ್ ತಂಡಕ್ಕೆ ಆಯ್ಕೆ ಮಾಡಿದ್ದಾರೆ.
ವಿಜಯ್ ಹಝಾರೆ ಟ್ರೋಫಿಯಲ್ಲಿ 2 ಪಂದ್ಯಗಳನ್ನು ಆಡಿದ್ದ ರೋಹಿತ್ ಕ್ರಮವಾಗಿ 16 ಹಾಗೂ 4 ರನ್ ಗಳಿಸಿದ್ದರು. ರೋಹಿತ್ ಅನುಪಸ್ಥಿತಿಯಲ್ಲಿ ಆಫ್-ಸ್ಪಿನ್ನರ್ ಹರ್ಭಜನ್ ಸಿಂಗ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.
ಶ್ರೇಯಸ್ ಅಯ್ಯರ್ ಧರ್ಮಶಾಲಾದಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಸೇರಿಕೊಳ್ಳುವ ಅವಕಾಶ ಪಡೆದಿರುವ ಕಾರಣ ಬ್ಲೂ ತಂಡಕ್ಕೆ ಲಭ್ಯವಿರುವುದಿಲ್ಲ. ದೇವಧರ್ ಟ್ರೋಫಿ ಶನಿವಾರ ಆರಂಭವಾಗಲಿದ್ದು, ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಇಂಡಿಯಾ ರೆಡ್ ಹಾಗೂ ಬ್ಲೂ ತಂಡಗಳಲ್ಲದೆ ವಿಜಯ್ ಹಝಾರೆ ಟ್ರೋಫಿ ವಿನ್ನರ್ ತಮಿಳುನಾಡು ತಂಡ ಸ್ಪರ್ಧಿಸಲಿದೆ.
ದೇವಧರ್ ಟ್ರೋಫಿಗೆ ತಂಡಗಳು ಇಂತಿವೆ.
ಇಂಡಿಯಾ ‘ಬ್ಲೂ’: ಹರ್ಭಜನ್ ಸಿಂಗ್(ನಾಯಕ), ಮನ್‌ದೀಪ್ ಸಿಂಗ್,ಅಂಬಟಿ ರಾಯುಡು, ಮನೋಜ್ ತಿವಾರಿ, ರಿಷಬ್ ಪಂತ್(ವಿಕೆಟ್‌ಕೀಪರ್), ದೀಪಕ್ ಹೂಡ, ಕ್ರುನಾಲ್ ಪಾಂಡ್ಯ, ಶಹಬಾಝ್ ನದೀಮ್, ಸಿದ್ದಾರ್ಥ್ ಕೌಲ್, ಶಾರ್ದೂಲ್ ಠಾಕೂರ್, ಪ್ರಸಿದ್ಧ ಕೃಷ್ಣ, ಪಂಕಜ್ ರಾವ್, ಋತುರಾಜ್ ಗಾಯಕ್ವಾಡ್.
ಇಂಡಿಯಾ ‘ರೆಡ್’: ಪಾರ್ಥಿವ್ ಪಟೇಲ್(ನಾಯಕ, ವಿಕೆಟ್‌ಕೀಪರ್)ಶಿಖರ್ ಧವನ್, ಮನೀಷ್ ಪಾಂಡೆ, ಮಾಯಾಂಕ್ ಅಗರವಾಲ್, ಇಶಾಂಕ್ ಜಗ್ಗಿ, ಗುರುಕೀರತ್ ಮಾನ್, ಅಕ್ಷರ್ ಪಟೇಲ್, ಅಕ್ಷಯ್, ಅಶೋಕ್ ದಿಂಡ, ಕುಲ್ವಂತ್, ಧವಳ್ ಕುಲಕರ್ಣಿ, ಗೋವಿಂದ ಪೊದ್ದಾರ್, ಶ್ರೀವಾಸ್ತವ ಗೋಸ್ವಾಮಿ, ಸಿ.ವಿ.ಮಿಲಿಂದ್.







