ಭಾರತೀಯ ಕಲ್ಲಿದ್ದಲು ಲಿಮಿಟೆಡ್‌ಗೆ 591 ಕೋಟಿ ರೂ. ದಂಡ
ಕಲ್ಲಿದ್ದಲು ಪೂರೈಕೆಗೆ ‘ಅನ್ಯಾಯ’ದ ಶರತ್ತು
ಹೊಸದಿಲ್ಲಿ, ಮಾ,24: ಕಲ್ಲಿದ್ದಲು ಪೂರೈಕೆ ಒಪ್ಪಂದದಲ್ಲಿ ನ್ಯಾಯಯುತವಲ್ಲದ ಶರತ್ತುಗಳನ್ನು ಒಡ್ಡಿದೆಯೆಂಬ ಕಾರಣಕ್ಕಾಗಿ ಭಾರತೀಯ ಕಲ್ಲಿದ್ದಲು ಲಿಮಿಟೆಡ್‌ಗೆ 591 ಕೋಟಿ ರೂ. ದಂಡವನ್ನು ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಶುಕ್ರವಾರ ವಿಧಿಸಿದೆ.
ಸ್ಪರ್ಧಾತ್ಮಕತೆ ವಿರೋಧಿ ಕ್ರಮಗಳನ್ನು ತ್ಯಜಿಸುವಂತೆ ಅಥವಾ ಅಂಥವುಗಳಿಂದ ದೂರವಿರುವಂತೆಯೂ ಅದು ಭಾರತೀಯ ಕಲ್ಲಿದ್ದಲು ಲಿಮಿಟೆಡ್‌ಗೆ ಆದೇಶಿಸಿದೆ. ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಗಾಗಿ ಭಾರತೀಯ ಕಲ್ಲಿದ್ದಲು ಲಿಮಿಟೆಡ್ ನ್ಯಾಯಯುತವಲ್ಲದ ಹಾಗೂ ತಾರತಮ್ಯದಿಂದ ಕೂಡಿದ ಶರತ್ತುಗಳನ್ನು ಒಡ್ಡುತ್ತಿರುವುದಾಗಿ ಸಿಸಿಐ ತನ್ನ 56 ಪುಟಗಳ ಆದೇಶದಲ್ಲಿ ತಿಳಿಸಿದೆ.
ಸಿಸಿಐ ವಿಧಿಸಿರುವ ದಂಡವು, ಭಾರತೀಯ ಕಲ್ಲಿದ್ದಲು ನಿಗಮದ 2009-10ರಿಂದ 2011-12ರವರೆಗಿನ ಮೂರು ವರ್ಷಗಳ ಅವಧಿಯಲ್ಲಿ ನಡೆಸಿದ ಸರಾಸರಿ ವಹಿವಾಟಿನ ಶೇ. 1ರಷ್ಟಾಗಿದೆ. ಕಲ್ಲಿದ್ದಲು ಪೂರೈಕೆಗಾಗಿ ಹಳೆಯ ಹಾಗೂ ಹೊಸ ವಿದ್ಯುತ್ ಉತ್ಪಾದಕರು, ಖಾಸಗಿ ಮತ್ತು ಸಾರ್ವಜನಿಕ ರಂಗದ ವಿದ್ಯುತ್ ಉತ್ಪಾದನಾ ಸಂಸ್ಥೆಗಳ ಜೊತೆ ಮಾಡಿಕೊಳ್ಳುವ ಒಪ್ಪಂದಗಳಲ್ಲಿ ಏಕರೂಪತೆಯನ್ನು ಖಾತರಿಪಡಿಸಿಕೊಳ್ಳಬೇಕೆಂದು ಆಯೋಗವು ಸೂಚನೆ ನೀಡಿದೆ.





