ರೆಸಾರ್ಟ್ ವಿರುದ್ಧ ಕೇಸ್
ನೃತ್ಯಪ್ರದರ್ಶನದಲ್ಲಿ ಬಾಲಕಿಗೆ ಕಿರುಕುಳ
ಜೈಪುರ, ಮಾ.24: ನೃತ್ಯ ಪ್ರದರ್ಶನದ ವೇಳೆ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿ ದಿಲ್ಲಿ ಮಹಿಳಾ ಆಯೋಗ (ಡಿಸಿಡಬ್ಲು)ದ ಅಧ್ಯಕ್ಷೆ ಸ್ವಾತಿ ಮಲಿವಾಲ್ ನೀಡಿದ ದೂರಿನ ಮೇರೆಗೆ ರಾಜಸ್ಥಾನ ಪೊಲೀಸರು ಇಲ್ಲಿನ ರೆಸಾರ್ಟೊಂದರ ವಿರುದ್ಧ ಶುಕ್ರವಾರ ಕ್ರಿಮಿನಲ್ ಪ್ರಕರಣ ದಾಖಲಿಸಿದೆ. ಈ ತಿಂಗಳಾರಂಭದಲ್ಲಿ ಡಿಸಿಡಬ್ಲು ಅಧ್ಯಕ್ಷೆ ಸ್ವಾತಿ ಮಲಿವಾಲ್ ಟೊಂಕ್ ರಸ್ತೆಯಲ್ಲಿರುವ ‘ಚೋಕ್ ಧಾನಿ’ ರೆಸಾರ್ಟ್‌ಗೆ ಖಾಸಗಿಯಾಗಿ ಭೇಟಿ ನೀಡಿದ್ದ ವೇಳೆ, ಸಂಜೆಯ ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡುತ್ತಿದ್ದ 13 ವರ್ಷ ವಯಸ್ಸಿನ ಬಾಲಕಿಗೆ ಕೆಲವು ಪ್ರವಾಸಿಗರು ಕಿರುಕುಳ ನೀಡುತ್ತಿದ್ದುದನ್ನು ಗಮನಿಸಿದ್ದರು ಹಾಗೂ ಈ ಬಗ್ಗೆ ರಾಜಸ್ಥಾನ ಪೊಲೀಸರಿಗೆ ದೂರು ನೀಡಿದ್ದರು.
ಆದಾಗ್ಯೂ ಈ ಆರೋಪಗಳನ್ನು ರೆಸಾರ್ಟ್‌ನ ಆಡಳಿತಾಧಿಕಾರಿಗಳು ಅಲ್ಲಗಳೆದಿದ್ದಾರೆ. ರಾಜ್ಯದ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸುವ ಉದ್ದೇಶದಿಂದ ತಾವು ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಬಾಲಕಿಗೆ ಕಿರುಕುಳ ನೀಡಿದಂತಹ ಯಾವುದೇ ಘಟನೆ ನಡೆದಿಲ್ಲವೆಂದು ಹೇಳಿದ್ದಾರೆ.
‘‘ರೆಸಾರ್ಟ್‌ನಲ್ಲಿ ನೃತ್ಯಕಾರ್ಯಕ್ರಮದಲ್ಲಿ ಬಾಲಕಿಯನ್ನು ಪುರುಷ ಪ್ರವಾಸಿಗರು ಸುತ್ತುವರಿದಿದ್ದರು ಹಾಗೂ ಆಕೆಯ ಮೇಲೆ ನೋಟುಗಳನ್ನು ಸುರಿಯುತ್ತಿದ್ದರು. ಕೆಲವರು ಬಾಲಕಿ ನರ್ತಿಸುತ್ತಿದ್ದಾಗ ಅಸಭ್ಯವಾದ ರೀತಿಯಲ್ಲಿ ಆಕೆಯನ್ನು ಸ್ಪರ್ಶಿಸುತ್ತಿದ್ದರು’’ ಎಂದು ಸ್ವಾತಿ ಮಲಿವಾಲ್ ಜೈಪುರ ಪೊಲೀಸರಿಗೆ ನೀಡಿದ ದೂರಿನಲ್ಲಿ ಆಪಾದಿಸಿದ್ದಾರೆ.