ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ: ಖಂಡನೆ
ಮಂಗಳೂರು, ಮಾ.24: ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಿರಂತರವಾಗಿ ಮುಂದುವರಿಯುವ ಮೂಲಕ ಹಿಂಸೆಗೆ ಪ್ರಾಧಾನ್ಯತೆ ದೊರೆಯುತ್ತಿರುವುದು ಕಳವಳಕಾರಿ. ಸರಕಾರ ಮತ್ತು ಸಮಾಜ ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ವೈದ್ಯಕೀಯ ಸವಲತ್ತುಗಳಿಗೆ ಮಹಾ ಆಪತ್ತು ಬರಲಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಘಟಕ ಎಚ್ಚರಿಸಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಡಾ. ರಾಘವೇಂದ್ರ ಭಟ್ ಕೆ., ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಮೇಲೆ ಬಳ್ಳಾರಿಯ ವಿಜಯನಗರ, ಮಹಾರಾಷ್ಟ್ರದ ಧುಲೆಯಲ್ಲಿ ಗಂಭೀರಹಲ್ಲೆ ಪ್ರಕರಣಗಳು ಸಂಭವಿಸಿವೆ. ಈ ಹಿಂದೆ ರಾಜ್ಯದಲ್ಲಿ ಸಂಸದರೊಬ್ಬರು ನಡೆಸಿದ ಹಲ್ಲೆ ಸಹಿತ ಅನೇಕ ಪ್ರಕರಣಗಳಲ್ಲಿ ಸರಕಾರ ಇದುವರೆಗೆ ಕಠಿಣ ಕ್ರಮಕೈಗೊಂಡಿಲ್ಲ. ಇದರಿಂದ ವೈದ್ಯರು ರೋಗಿಗಳಿಗೆ ಶುಶ್ರೂಷೆ ನೀಡಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಸಂಘದ ಕೋಶಾಧ್ಯಕ್ಷ ಜಿ.ಕೆ. ಭಟ್ ಮತ್ತು ಸಂಘದ ನಿಯೋಜಿತ ಅಧ್ಯಕ್ಷ ಡಾ.ಕೆ.ಆರ್.ಕಾಮತ್ ಮಾತನಾಡಿದರು.
*ಇಂದು ಮನವಿ ಸಲ್ಲಿಕೆ
ವೈದ್ಯರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಆಗ್ರಹಿಸಿ ಸಂಘದ ವತಿಯಿಂದ ಇಂದು (ಮಾ.25) ದ.ಕ. ಜಿಲ್ಲಾದಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಹಾಗೂ ಪ್ರತಿಭಟನಾರ್ಥವಾಗಿ ಕಪ್ಪು ಪಟ್ಟಿ ಧರಿಸಲಿರುವುದಾಗಿ ತಿಳಿಸಿದ್ದಾರೆ.







