ಅತಿ ಎತ್ತರದ ರಾಷ್ಟ್ರಧ್ವಜಕ್ಕೆ ಪ್ರತಿಕೂಲ ಹವಾಮಾನ ಅಡ್ಡಿ

ಚಂಡೀಗಢ, ಮಾ.25: ಭಾರತ- ಪಾಕಿಸ್ತಾನ ಗಡಿಗೆ ಸಮೀಪ ಸ್ಥಾಪನೆ ಮಾಡಿರುವ ದೇಶದ ಅತಿ ಎತ್ತರದ ರಾಷ್ಟ್ರಧ್ವಜಕ್ಕೆ ಪ್ರತಿಕೂಲ ಹವಾಮಾನ ಅಡ್ಡಿಯಾಗಿದ್ದು, ಒಂದೇ ವಾರದಲ್ಲಿ ಎರಡು ಬಾರಿ ರಾಷ್ಟ್ರಧ್ವಜ ಬದಲಾಯಿಸಿದ ಘಟನೆ ನಡೆದಿದೆ.
ಪಾಕಿಸ್ತಾನ ಗಡಿಯ ಅತ್ತಾರಿಯಲ್ಲಿ ಈ ಧ್ವಜಸ್ತಂಭವಿದ್ದು, 355 ಅಡಿ ಎತ್ತರದಲ್ಲಿ ತ್ರಿವರ್ಣಧ್ವಜ ಹಾರಾಡುತ್ತಿದೆ. 120 ಅಡಿ ಉದ್ದ ಹಾಗೂ 80 ಅಡಿ ಅಗಲದ ಒಂದು ಧ್ವಜದ ವೆಚ್ಚ ಒಂದು ಲಕ್ಷ ರೂಪಾಯಿ. 5 ಅಡಿಯ ತಳ ಸೇರಿದಂತೆ ಇದು 125 ಕೆ.ಜಿ. ತೂಕವಿದೆ. ಬಲವಾದ ಗಾಳಿಯಿಂದಾಗಿ ಧ್ವಜ ಹರಿದ ಹಿನ್ನೆಲೆಯಲ್ಲಿ ಮಾರ್ಚ್ 5ರಂದು ಪ್ರಥಮ ಬಾರಿಗೆ ಹಾರಿಸಿದ ಬಳಿಕ ಎರಡು ಬಾರಿ ಬದಲಾಯಿಸಲಾಗಿದೆ.
ಅಮೃತಸರ ಅಭಿವೃದ್ಧಿ ಟ್ರಸ್ಟ್‌ನಲ್ಲಿ 12 ಹೆಚ್ಚುವರಿ ಧ್ವಜಗಳು ಮಾತ್ರ ಇದ್ದು, ಈ ಹಿನ್ನೆಲೆಯಲ್ಲಿ ಕೇವಲ ವಿಶೇಷ ಸಂದರ್ಭಗಳಲ್ಲಿ ಮಾತ್ರ ಧ್ವಜ ಹಾರಿಸುವ ಬಗ್ಗೆ ಕೂಡಾ ಚರ್ಚೆ ನಡೆದಿದೆ. ಅಥವಾ ಪ್ಯಾರಾಚ್ಯೂಟ್ ವಸ್ತ್ರವನ್ನು ತ್ರಿವರ್ಣ ಧ್ವಜಕ್ಕೆ ಹೊಲಿದು ವಿಶೇಷ ಧ್ವಜ ಸಿದ್ಧಪಡಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಇಂಥ ಒಂದು ಧ್ವಜಕ್ಕೆ 4 ಲಕ್ಷ ರೂಪಾಯಿ ವೆಚ್ಚವಾಗಲಿದ್ದು, ಮೂರು ತಿಂಗಳ ಗ್ಯಾರಂಟಿ ಇರುತ್ತದೆ.
ಪಂಜಾಬ್ ಸರ್ಕಾರ ಹೊಸದಾಗಿ ರಚಿಸಿರುವ ಸಮಿತಿ ಮುಂದಿನ ನಿರ್ಧಾರದ ಬಗ್ಗೆ ಸದ್ಯದಲ್ಲೇ ಚರ್ಚಿಸಲಿದ್ದು, ಧ್ವಜ ನಿರ್ವಹಣೆಯ ಈ ಸಮಿತಿಯಲ್ಲಿ ಟ್ರಸ್ಟ್ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಪ್ರತಿನಿಧಿಗಳು ಇರುತ್ತಾರೆ.
ತಿಂಗಳಿಗೆ ಐದು ಧ್ವಜ ಹಾರಿಸಬೇಕಾಗಿ ಬಂದರೆ ವರ್ಷಕ್ಕೆ 60 ಧ್ವಜ ಬೇಕಾಗುತ್ತದೆ. ಇದರಿಂದ 60 ಲಕ್ಷ ವೆಚ್ಚವಾಗಲಿದೆ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ದಿನ, ಪ್ರಜಾಪ್ರಭುತ್ವ ದಿನ, ಹೋಳಿ, ದೀಪಾವಳಿಯಂಥ ವಿಶೇಷ ಸಂದರ್ಭದಲ್ಲಷ್ಟೇ ಧ್ವಜ ಹಾರಿಸುವ ಬಗ್ಗೆ ಚರ್ಚಿಸಲಾಗಿದೆ ಎಂದು ಅಮೃತಸರ ಅಭಿವೃದ್ಧಿ ಟ್ರಸ್ಟ್ ಅಧೀಕ್ಷಕ ಎಂಜಿನಿಯರ್ ರಾಜೀವ್ ಸೇಖ್ರಿ ಹೇಳಿದ್ದಾರೆ.