ಗೋವಾಗೆ ಪಾರಿಕ್ಕರ್ ಕೊಡುಗೆ: ಪೆಟ್ರೋಲ್, ಬಿಯರ್ ತುಟ್ಟಿ

ಪೊರ್ವೊರಿಮ್, ಮಾ.25: ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಮತ್ತೆ ಬಂದಿರುವ ಮುಖ್ಯಮಂತ್ರಿ ಮನೋಹರ ಪಾರಿಕ್ಕರ್, ಗೋವಾ ಜನತೆಗೆ ಎರಡು ವಿಶೇಷ ಕೊಡುಗೆ ನೀಡಿದ್ದಾರೆ. ಹಣಕಾಸು ಖಾತೆಯನ್ನೂ ಹೊಂದಿರುವ ಪಾರಿಕ್ಕರ್, 2012ರಲ್ಲಿ ನೀಡಿದ್ದ ಆಶ್ವಾಸನೆಗೆ ವಿರುದ್ಧವಾಗಿ ನಿರ್ಧಾರ ಕೈಗೊಂಡಿದ್ದಾರೆ. ಪೆಟ್ರೋಲ್ ಬೆಲೆಯನ್ನು 60 ರೂಪಾಯಿಯ ಒಳಗಿಡುವುದಾಗಿ ಪಾರಿಕ್ಕರ್ ಭರವಸೆ ನೀಡಿದ್ದರು. ಅಂತೆಯೇ ಪಾನಪ್ರಿಯರಿಗೂ ಶಾಕ್ ನೀಡಿರುವ ಪಾರಿಕ್ಕರ್, ಬಿಯರ್ ಬೆಲೆಯನ್ನು ಲೀಟರ್‌ಗೆ 2 ರಿಂದ 5 ರೂಪಾಯಿನಷ್ಟು ಹೆಚ್ಚಿಸಿದ್ದಾರೆ.
ವಾಹನ ಇಂಧನದ ಮೌಲ್ಯವರ್ಧಿತ ತೆರಿಗೆಯನ್ನು ಶೇಕಡ 7ರಿಂದ 15ಕ್ಕೆ ಹೆಚ್ಚಿಸಿರುವುದರಿಂದ ಪೆಟ್ರೋಲ್ ಬೆಲೆ 65 ರೂಪಾಯಿ ಆಗುವ ನಿರೀಕ್ಷೆ ಇದೆ. ಹಾಲಿ ಹಾಗೂ ಹೊಸ ಯೋಜನೆಗಳ ಅನುಷ್ಠಾನಕ್ಕೆ ಹಣಕಾಸು ಅಗತ್ಯತೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಬಿಯರ್ ಮೇಲಿನ ಅಬಕಾರಿ ಸುಂಕವನ್ನೂ ಹೆಚ್ಚಿಸಲಾಗಿದ್ದು, ಸ್ಪಿರಿಟ್ ಆಧರಿತ ಪೇಯಗಳಿಗೆ ಒಂದು ಲಕ್ಷ ರೂಪಾಯಿ ಲೈಸನ್ಸ್ ಶುಲ್ಕ ವಿಧಿಸಿದ್ದಾರೆ.