ಎಪ್ರಿಲ್ 1ರಿಂದ ಆದಾಯ ತೆರಿಗೆಯಲ್ಲಿ ಏನೆಲ್ಲಾ ಬದಲಾವಣೆಗಳಾಗಲಿವೆ ಗೊತ್ತೇ?

ಹೊಸದಿಲ್ಲಿ, ಮಾ.25: ಹಣಕಾಸು ಮಸೂದೆ ಬುಧವಾರ ಅಂಗೀಕಾರಗೊಂಡಿದ್ದು, 2017-18ನೆ ಸಾಲಿನ ಬಜೆಟ್ ಸಂಬಂಧಿತ ಪ್ರಕ್ರಿಯೆಯನ್ನು ಲೋಕಸಭೆ ಪೂರ್ತಿಗೊಳಿಸಿದೆ. ಎಪ್ರಿಲ್ 1ರಿಂದ ಆದಾಯ ತೆರಿಗೆಯಲ್ಲಿ ಕೆಳಗೆ ನೀಡಲಾದ ಕೆಲ ಪ್ರಮುಖ ಬದಲಾವಣೆಗಳಾಗಲಿವೆ.
1. ರೂ.2.5ರಿಂದ ರೂ.5 ಲಕ್ಷ ಆದಾಯವಿರುವವರಿಗೆ ಆದಾಯ ತೆರಿಗೆಯನ್ನು ಅರ್ಧಕ್ಕೆ ಅಂದರೆ ಶೇ.5ಕ್ಕೆ ಇಳಿಸಲಾಗಿದೆ.
ಈ ಹಿಂದೆ ಈ ಆದಾಯ ವಿಭಾಗದಲ್ಲಿ ಬರುವವರು ಶೇ.10ರಷ್ಟು ಆದಾಯ ತೆರಿಗೆ ಪಾವತಿಸಬೇಕಿದ್ದರೆ, ಇದೀಗ ಅದು ಎಪ್ರಿಲ್ 1ರಿಂದ ಶೇ.5ರಷ್ಟಾಗುತ್ತಿದೆ.
2. ರೂ.50 ಲಕ್ಷದಿಂದ ರೂ.1 ಕೋಟಿಯಷ್ಟು ಆದಾಯವಿರುವ ತೆರಿಗೆದಾರರ ಮೇಲೆ ಶೇ.10ರಷ್ಟು ಸರ್ಚಾರ್ಜ್ ವಿಧಿಸಲಾಗುವುದು. ಅದೇ ಸಮಯ ರೂ.1 ಕೋಟಿಗಿಂತಲೂ ಅಧಿಕ ಆದಾಯ ಹೊಂದಿದವರು ಶೇ.15ರಷ್ಟು ಸರ್ಚಾರ್ಜ್ ಪಾವತಿಸಬೇಕು.
3. ರೂ.5 ಲಕ್ಷದಷ್ಟು ಆದಾಯ ಹೊಂದಿರುವವರು ಒಂದು ಪುಟದ ಟ್ಯಾಕ್ಸ್ ರಿಟರ್ನ್ ಫಾರ್ಮ್ ಅನ್ನು ತುಂಬಿಸಬೇಕು.
ಬಿಸಿನೆಸ್ ಆದಾಯ ಹೊರತು ಪಡಿಸಿ ರೂ.5 ಲಕ್ಷದಷ್ಟು ತೆರಿಗೆ ಹೇರಬಲ್ಲ ಆದಾಯವಿರುವ ವ್ಯಕ್ತಿಗಳು ಒಂದು ಪುಟದ ಸರಳ ತೆರಿಗೆ ಫಾರ್ಮ್ ತುಂಬಿಸಬೇಕಿದೆ. ಮೇಲಾಗಿ ಈ ವಿಭಾಗದಲ್ಲಿ ಬರುವವರು ಮೊದಲ ಬಾರಿ ಆದಾಯ ತೆರಿಗೆ ಪಾವತಿಸುವವರಾಗಿದ್ದರೆ ಅವರನ್ನು ಪ್ರಥಮ ವರ್ಷದಲ್ಲಿ ಸರಕಾರದ ಬಳಿ ಏನಾದರೂ ನಿರ್ದಿಷ್ಟ ಮಾಹಿತಿಯಿರದ ಹೊರತು ಯಾವುದೇ ತಪಾಸಣೆಗೆ ಗುರಿ ಪಡಿಸಲಾಗುವುದಿಲ್ಲ.
4. ತಡವಾಗಿ ಆದಾಯ ತೆರಿಗೆ ಪಾವತಿಸುವವರಿಗೆ ರೂ.10,000 ತನಕ ದಂಡ
ಆದಾಯ ತೆರಿಗೆಯನ್ನು ಕೊನೆಯ ದಿನಾಂಕದ ನಂತರ ಆದರೆ ಡಿಸೆಂಬರ್ 31ರೊಳಗಾಗಿ ಪಾವತಿಸಿದಲ್ಲಿ ರೂ. 5000 ದಂಡ ಪಾವತಿಸಬೇಕು. ಇತರ ಪ್ರಕರಣಗಳಲ್ಲಿ ರೂ.10,000 ಪಾವತಿಸಬೇಕು. ಆದರೆ ಆದಾಯ ರೂ.5 ಲಕ್ಷ ದಾಟದೇ ಹೋದಲ್ಲಿ ದಂಡ ಮೊತ್ತ ರೂ.1000 ದಾಟದು.
5. ಟ್ಯಾಕ್ಸ್ ರಿಟರ್ನ್ ಪರಿಷ್ಕರಣೆ ಸಮಯವನ್ನು 12 ತಿಂಗಳುಗಳಿಗೆ ಇಳಿಸಲಾಗಿದೆ.
ಈ ಹಿಂದೆ ಇದ್ದ ಎರಡು ವರ್ಷಗಳ ಬದಲು ಟ್ಯಾಕ್ಸ್ ರಿಟರ್ನ್ ಪರಿಷ್ಕರಣೆಗೆ ಸಂಬಂಧಿತ ಆರ್ಥಿಕ ವರ್ಷದಿಂದ ಇಲ್ಲವೇ ಅಸೆಸ್ ಮೆಂಟ್ ವರ್ಷದಿಂದ, ಯಾವುದು ಮುಂಚಿತವಾಗುವುದೋ ಆ ಸಮಯದಿಂದ ಒಂದು ವರ್ಷ ಸಮಯ ಮಿತಿ ನಿಗದಿಪಡಿಸಲಾಗಿದೆ.







