ಲಕ್ನೋ: ಮಾಂಸ ಮಾರಾಟಗಾರರ ಮುಷ್ಕರ

ಲಕ್ನೋ, ಮಾ.25: ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಸಸ್ಯಾಹಾರಿಯಾಗುವತ್ತ ಹೆಜ್ಜೆಯಿಡುತ್ತಿದೆಯೇನೋ ಎಂಬಂತೆ ಭಾಸವಾಗಲಾರಂಭಿಸಿದೆ. ಎತ್ತಿನ ಮಾಂಸ ಬಿಡಿ ಕೋಳಿ, ಆಡಿನ ಮಾಂಸ ಹಾಗೂ ಮೊಟ್ಟೆ ಮಾರಾಟದ ಅಂಗಡಿಗಳೂ ಬಾಗಿಲು ಮುಚ್ಚುತ್ತಿವೆ. ನಗರದಲ್ಲಿ ಮಾಂಸಾಹಾರ ಮಾರಾಟ ಮಾಡುವ ಶೇ.80ರಷ್ಟು ಮಾರುಕಟ್ಟೆಗಳು ಶುಕ್ರವಾರ ಮುಚ್ಚಿದ್ದರೆ ವಿವಿಧ ವರ್ತಕರ ಸಂಘಟನೆಗಳು ಶನಿವಾರದಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿವೆ.
ಕಳೆದ ಒಂದು ವಾರದಿಂದ ಇಳಿಕೆಯಾಗಿದ್ದ ತರಕಾರಿ ದರಗಳು ಮುಂದಿನ ದಿನಗಳಲ್ಲಿ ಭಾರೀ ಏರಿಕೆ ಕಾಣುವ ಸಂಭವವಿದೆ. ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ರಾಜ್ಯದಲ್ಲಿರುವ ಎಲ್ಲಾ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಲಾಗುತ್ತಿದ್ದು, ಬಹಳಷ್ಟು ಕಡೆ ಮಾಂಸದ ಕೊರತೆ ಕಾಣಿಸಿಕೊಂಡಿದೆಯಲ್ಲದೆ, ಹಲವು ಖ್ಯಾತ ಕಬಾಬ್ ಮಳಿಗೆಗಳು ಮುಚ್ಚಿವೆ. ಕಳದೊಂದು ವಾರದಲ್ಲಿ ರಾಜ್ಯದಲ್ಲಿ ಹಲವಾರು ಮಾಂಸ ಹಾಗೂ ಮೀನಿನ ಅಂಗಡಿಗಳಿಗೆ ಬೆಂಕಿ ಕೂಡ ಹಚ್ಚಲಾಗಿದೆ.
ಕೆಲವು ವರ್ತಕರು ತಮ್ಮಲ್ಲಿ ಅಳಿದುಳಿದಿರುವ ಮಾಂಸವನ್ನು ಮಾರಾಟ ಮಾಡಿ ಮಳಿಗೆಗಳನ್ನು ಮುಚ್ಚುವ ಸಿದ್ಧತೆಯಲ್ಲಿದ್ದಾರೆ.
ಶನಿವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಗೊಂಡಲ್ಲಿ ರಾಜ್ಯದಲ್ಲಿ ಎಲ್ಲಾ ಮಾಂಸ, ಮೀನು ಹಾಗೂ ಮೊಟ್ಟೆಯಂಗಡಿಗಳು ಬಂದ್ ಆಗಲಿವೆ. ಮಾಂಸಾಹಾರಿ ಹೊಟೇಲುಗಳು ಹಾಗೂ ರೆಸ್ಟಾರೆಂಟುಗಳಿಗೂ ಈ ಮುಷ್ಕರದ ಬಸಿ ತಟ್ಟಲಿದೆ.
ಎತ್ತಿನ ಮಾಂಸ ಅತ್ಯಂತ ಕಡಿಮೆ ಬೆಲೆಯ ಮಾಂಸವಾಗಿರುವುದರಿಂದ ಅದರ ಪೂರೈಕೆ ನಿಂತ ಕೂಡಲೇ ಅದು ಕೋಳಿ ಮಾಂಸ, ಆಡಿನ ಮಾಂಸ ಮೊಟ್ಟೆ ಹಾಗೂ ತರಕಾರಿಗಳ ಬೇಡಿಕೆ-ಪೂರೈಕೆ ಅನುಪಾತದ ಮೇಲೆ ಪರಿಣಾಮ ಬೀರಲಿದೆ.
ಅಲಹಾಬಾದ್ ನಗರದಲ್ಲೂ ಗೋಮಾಂಸ ಹಾಗೂ ಆಡಿನ ಮಾಂಸದಂಗಡಿಗಳು ಮುಚ್ಚಿವೆ. ಹಳೆ ನಗರ ಪ್ರದೇಶವಾದ ಅಟಲದಲ್ಲಿರುವ ಅತ್ಯಂತ ದೊಡ್ಡ ಗೋಮಾಂಸ ಮಾರುಕಟ್ಟೆಯಂತೂ ಬಿಕೋ ಎನ್ನುತ್ತಿತ್ತು.
ಲಕ್ನೋದಲ್ಲಿನ ಮಾಂಸ ಮಾರಾಟಗಾರರ ಮುಷ್ಕರ ಬಹಳ ಬೇಗನೇ ರಾಜ್ಯದ ಇತರೆಡೆಗಳಿಗೂ ಹರಡುವ ಸಾಧ್ಯತೆಯಿದೆ.