ಸೆಲ್ಫಿ ಅವಾಂತರ: ಮಹಿಳಾ ಪೇದೆಗಳು ಅಮಾನತು
ಆ್ಯಸಿಡ್ ದಾಳಿ ಸಂತ್ರಸ್ತೆ ದಾಖಲಾಗಿರುವ ಆಸ್ಪತ್ರೆ ಕೊಠಡಿಯಲ್ಲಿ ಸೆಲ್ಫಿ!

ಲಕ್ನೋ, ಮಾ.25: ನಗರದ ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆ್ಯಸಿಡ್ ದಾಳಿ ಸಂತ್ರಸ್ತೆ ಇರುವ ಟ್ರಾಮಾ ಸೆಂಟರಿನಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಮಹಿಳಾ ಪೇದೆಗಳು ಸೆಲ್ಫಿ ತೆಗೆದಿದ್ದಕ್ಕಾಗಿ ಸೇವೆಯಿಂದ ವಜಾಗೊಂಡಿದ್ದಾರೆ.
ಸಂತ್ರಸ್ತೆಯ ಬೆಡ್ ಬಳಿ ಕುಳಿತುಕೊಂಡಿದ್ದ ಮೂವರು ಮಹಿಳಾ ಪೇದೆಗಳು ಸೆಲ್ಫಿ ತೆಗೆಯುತ್ತಿರುವ ಚಿತ್ರವೊಂದು ಬಹಳಷ್ಟು ಸುದ್ದಿಯಾಗುತ್ತಿದೆ. ಮೂರನೇ ಮಹಿಳಾ ಪೇದೆ ರೈಲ್ವೇ ಪೊಲೀಸ್ ಸೇವೆಯಲ್ಲಿದ್ದು, ಆಕೆಯ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.
ಆರೋಪಿ ಮಹಿಳಾ ಪೇದೆಗಳನ್ನು ಬಾಲಾ ಸಿಂಗ್ ಹಾಗೂ ಡೈಸಿ ಸಿಂಗ್ ಎಂದು ಗುರುತಿಸಲಾಗಿದೆ. ಅವರಿಬ್ಬರನ್ನು ವಿಚಾರಣೆಯ ನಂತರ ವಜಾಗೊಳಿಸಲಾಗಿದೆ.
ಎಂಟು ವರ್ಷಗಳ ಹಿಂದೆ ಆ್ಯಸಿಡ್ ದಾಳಿಗೊಳಗಾಗಿ ಗ್ಯಾಂಗ್ ರೇಪಿಗೂ ಒಳಗಾಗಿದ್ದ ಸಂತ್ರಸ್ತೆಯ ಮೇಲೆ ಇತ್ತೀಚೆಗೆ ಮತ್ತೆ ದಾಳಿ ನಡೆದಿದ್ದು, ದುಷ್ಕರ್ಮಿಗಳು ಆಕೆಗೆ ಬಲವಂತವಾಗಿ ಆ್ಯಸಿಡ್ ಕುಡಿಸಿದ್ದರು. ಆಕೆಯ ಮೇಲೆ ಹಿಂದೆ ದಾಳಿ ನಡೆಸಿದವರೇ ಈ ಕೃತ್ಯದಲ್ಲೂ ಶಾಮೀಲಾಗಿರಬೇಕೆಂದು ಶಂಕಿಸಲಾಗಿದೆ.
ಸಂತ್ರಸ್ತೆ ಅಲಹಾಬಾದ್- ಲಕ್ನೋ ಗಂಗಾ ಗೋಮತಿ ಎಕ್ಸ್ ಪ್ರೆಸ್ ರೈಲು ಗಾಡಿಯಿಂದ ಚಾರ್ಭಾಗ್ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ಮಾತನಾಡುವ ಸ್ಥಿತಿಯಲ್ಲಿಲ್ಲದೆ ಕಾಗದದ ಚೂರೊಂದರಲ್ಲಿ ತನ್ನ ಸಮಸ್ಯೆಯನ್ನು ವಿವರಿಸಿ ರೈಲ್ವೇ ಪೊಲೀಸರಿಗೆ ತಿಳಿಸಿದಾಗಲಷ್ಟೇ ಘಟನೆ ಬೆಳಕಿಗೆ ಬಂದಿತ್ತು.
ಲಕ್ನೋದಿಂದ 100 ಕಿ.ಮೀ. ದೂರದಲ್ಲಿರುವ ಉಂಚಹರ್ ಎಂಬಲ್ಲಿನ ಆಕೆಯ ಮನೆ ಸಂಬಂಧ ಇರುವ ತಕರಾರಿನಿಂದಾಗಿ ಆಕೆಯ ಮೇಲೆ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







