2 ಬಾರಿ ಸೋತವರಿಗೆ ಟಿಕೆಟ್ ಇಲ್ಲ :ಕಾಂಗ್ರೆಸ್ ನಿರ್ಧಾರ

ಅಹ್ಮದಾಬಾದ್,ಮಾ.25 : ಈ ಹಿಂದೆ ಎರಡು ಬಾರಿ ಚುನಾವಣೆಗಳಲ್ಲಿ ಸೋತವರಿಗೆ ಮುಂಬರುವ ವಿಧಾನಸಭಾ ಚುನಾವಣೆ ಸ್ಪರ್ಧಿಸಲು ಟಿಕೆಟ್ ನೀಡಲಾಗುವುದಿಲ್ಲ ಎಂದು ಗುಜರಾತ್ ಕಾಂಗ್ರೆಸ್ ಘಟಕ ಸ್ಪಷ್ಟ ಪಡಿಸಿದೆ. ಅಷ್ಟೇ ಅಲ್ಲ 20,000ಕ್ಕೂ ಹೆಚ್ಚಿನ ಅಂತರದಲ್ಲಿ ಸೋತವರಿಗೂ ಟಿಕೆಟ್ ನಿರಾಕರಿಸಲಾಗುವುದು ಎಂದು ಪಕ್ಷ ತಿಳಿಸಿದೆ. ಶುಕ್ರವಾರ ನಡೆದ ಕಾಂಗ್ರೆಸ್ ಕೋರ್ ಸಮಿತಿ ಸಭೆಯಲ್ಲಿ ಈ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
ರಾಜ್ಯದ ಒಟ್ಟು 182 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಯೊಂದಕ್ಕೂ ಅಭ್ಯರ್ಥಿಗಳನ್ನು ಸೂಚಿಸಲು ಸಮಿತಿಗಳನ್ನು ರಚಿಸುವ ಕಾರ್ಯ ಮುಂದಿನ ವಾರದಿಂದ ಆರಂಭಗೊಳ್ಳಲಿದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭರತ್ ಸಿಂಗ್ ಸೋಲಂಕಿ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು. ಈ ಸಮಿತಿಗಳು ಸೂಚಿಸಿದ ಹೆಸರುಗಳನ್ನು ಪಕ್ಷದ ಕೇಂದ್ರ ನಾಯಕತ್ವಕ್ಕೆ ಕಳುಹಿಸಿ ಹೆಸರುಗಳನ್ನು ಅಂತಿಮಗೊಳಿಸಲಾಗುವುದು. ಪ್ರತಿಯೊಂದು ಸಮಿತಿ ಒಂದು ಕ್ಷೇತ್ರಕ್ಕೆ ಎರಡರಿಂದ ಮೂರು ಹೆಸರುಗಳನ್ನು ಸೂಚಿಸಬಹುದಾಗಿದೆ.
ಪಕ್ಷವು ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ನೀಡುವುದು ಎಂದು ಸೋಲಂಕಿ ತಿಳಿಸಿದ್ದಾರೆ.
ತರುವಾಯ ಈ ಹಿಂದೆ ಯೋಜಿಸಿದಂತೆ ಪಕ್ಷ ರಾಜ್ಯದ ಆದಿವಾಸಿ ಪ್ರದೇಶಗಳಲ್ಲಿ ಯಾವುದೇ ಯಾತ್ರೆ ಕೈಗೊಳ್ಳದಿರಲು ತೀರ್ಮಾನಿಸಿದೆ. ಹತ್ತನೇ ಮತ್ತು ಹನ್ನೊಂದನೇ ತರಗತಿ ಪರೀಕ್ಷೆಗಳ ಹಿನ್ನೆಲೆಯಲ್ಲಿ ಎಪ್ರಿಲ್ ತಿಂಗಳಲ್ಲಿ ಆರಂಭಿಸಬೇಕಿದ್ದ ಆದಿವಾಸಿ ವಿಕಾಸ್ ಯಾತ್ರೆಯನ್ನು ಮುಂದೂಡಲಾಗಿದೆ. ಇದರ ಬದಲು ಎಪಿಲ್ 3 ರಿಂದ 13ರ ತನಕ ಐದು ಬೃಹತ್ ರ‍್ಯಾಲಿಗಳನ್ನು ಆಯೋಜಿಸಲಾಗುವುದು ಎಂದು ಸೋಲಂಕಿ ಹೇಳಿದ್ದಾರೆ.







