ಲಿಫ್ಟ್ ಕುಸಿದು ಕಾರ್ಮಿಕನ ದಾರುಣ ಸಾವು

ಕಾಸರಗೋಡು, ಮಾ.25: ಮನೆ ನಿರ್ಮಾಣ ಕಾಮಗಾರಿ ಸಂದರ್ಭದಲ್ಲಿ ತಾತ್ಕಾಲಿಕ ಲಿಫ್ಟ್ ಕುಸಿದು ಬಿದ್ದು ಕರ್ನಾಟಕ ಗದಗ ಮೂಲದ ಕಾರ್ಮಿಕ ಮೃತಪಟ್ಟ ದಾರುಣ ಘಟನೆ ಪೆರ್ಲ ಬಜಕೂಡ್ಲುವಿನಲ್ಲಿ ನಡೆದಿದೆ.
ಗದಗ ಸಿಂಗಳೂರಿನ ಕನಕಪ್ಪ ( 19) ಮೃತಪಟ್ಟವರು. ತಂದೆ ರಮೇಶ್ ರವರ ಕಣ್ಮುಂದೆಯೇ ಈ ಘಟನೆ ನಡೆದಿದೆ. ಹಲವು ವರ್ಷಗಳಿಂದ ಬದಿಯಡ್ಕ ವಿದ್ಯಾಗಿರಿಯ ಯಲ್ಲಿ ವಾಸಿಸುತ್ತಿರುವ ಕುಟುಂಬದವರು ಕೂಲಿ ಕೆಲಸ ನಿರ್ವಹಿಸುತ್ತಿದ್ದರು. ತಂದೆ ರಮೇಶ್ ಮತ್ತು ಕನಕಪ್ಪ ಜೊತೆಯಾಗಿ ಕೆಲಸ ನಿರ್ವಹಿಸುತ್ತಿದ್ದರು.
ಬಜಕೂಡ್ಲುವಿನಲ್ಲಿ ಮನೆ ನಿರ್ಮಾಣ ಕೆಲಸದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕಾಂಕ್ರೀಟ್ ಕೆಲಸದ ಸಂದರ್ಭದಲ್ಲಿ ತಾತ್ಕಾಲಿಕ ಲಿಫ್ಟ್ ಮಾಡಲಾಗಿತ್ತು. ಕೆಲಸ ಮುಗಿದ ಬಳಿಕ ಇದನ್ನು ತೆರವುಗೊಳಿಸುತ್ತಿದ್ದಾಗ ಕುಸಿದುಬಿದ್ದು, ಅವಶೇಷಗಳಡಿ ಸಿಲುಕಿ ಗಂಭೀರ ಗಾಯಗೊಂಡ ಕನಕಪ್ಪ ರವರನ್ನು ಮಂಗಳೂರು ಆಸ್ಪತ್ರೆಗೆ ತಲಪಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು.
ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಾಗಿದ್ದು , ಊರಿಗೆ ಕೊಂಡೊಯ್ಯಲಾಗಿದೆ. ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





