ಡಾ.ಅಬ್ದುಲ್ ಕಲಾಂ - ನಾವು ತಿಳಿಯದೇ ಹೋದ ಸತ್ಯ..!

ಅಧಿಕಾರ ಇರುವುದೇ ಅನುಭವಿಸಲು, ನಂತರ ಅದು ತಮ್ಮವರಿಗೆ ಮತ್ತು ಅಧಿಕಾರ ಅವಧಿಯಲ್ಲಿ ಆದಷ್ಟು ಗಳಿಸಿ ಕೂಡಿ ಹಾಕುವುದೇ ಮುಖ್ಯ ಎನ್ನುವ ಕಾಲದಲ್ಲಿ, ಡಾ.ಅಬ್ದುಲ್ ಕಲಾಂನಂಥವರೂ ಇರುತ್ತಾರೆ ಎನ್ನುವುದು ದೇಶ ಹೆಮ್ಮೆ ಪಡುವ ವಿಷಯ. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಮೈಸೂರು ದಿವಾನರಾಗಿದ್ದಾಗ, ಸ್ವಂತದ ಕೆಲಸ ಮಾಡುವಾಗ ಸರಕಾರದ ದೀಪವನ್ನು ಆರಿಸಿ ಮನೆ ದೀಪವನ್ನು ಹಚ್ಚಿಕೊಳ್ಳುತ್ತಿದ್ದರಂತೆ. ಇಂಥಹ ಆದರ್ಶಗಳು ಈಗ ಇತಿಹಾಸದ ಪುಟದಲ್ಲಿ ಮಾತ್ರ ಸಿಗಬಹುದು.
ಡಾ. ಅಬ್ದುಲ್ ಕಲಾಂ ಈ ದೇಶ ಕಂಡ ಜನಪ್ರಿಯ ಮತ್ತು ಸದಾ ನೆನಪಿನಲ್ಲಿರುವ ರಾಷ್ಟ್ರಪತಿ ಆಗಿದ್ದರು. ಅಲ್ಲದೆ ಆ ಹುದ್ದೆಯ ಘನತೆಯನ್ನು ಇನ್ನೂ ಉತ್ತುಂಗಕ್ಕೆ ಏರಿಸಿದ ಮಹಾನ್ ವ್ಯಕ್ತಿಯೂ ಆಗಿದ್ದರು. ಅವರ ಇನ್ನೊಂದು ವಿಶೇಷತೆ ಎಂದರೆ, ತೀರಾ ಬಡ ಕುಟುಂಬದಲ್ಲಿ ಜನಿಸಿ, ದೇಶದ ಅತ್ಯುನ್ನತ ಪದವಿ ಪಡೆದಿದ್ದ ಅವರನ್ನು, ಹುದ್ದೆಯೇ ಹುಡುಕಿಕೊಂಡು ಬಂದಿತೇ ವಿನಃ, ಇವರು ಹುದ್ದೆಯ ಬಾಗಿಲನ್ನು ಎಂದೂಬಡಿಯಲಿಲ್ಲ. ತಮ್ಮ ಅಧಿಕಾರ ಅವಧಿಯಲ್ಲಿ ವಿವಾದ ಮುಕ್ತರಾಗಿದ್ದರಲ್ಲದೆ, ತಮ್ಮ ಕಾರ್ಯ ವೈಖರಿಯಿಂದ ಜನಮನ್ನಣೆ ಗಳಿಸಿದ್ದರು. ತಮ್ಮ ವೈಯಕ್ತಿಕ ಜೀವನದಲ್ಲಿ ಕೂಡಾ ತಮ್ಮ ಸರಳತೆ ಮತ್ತು ಸಜ್ಜನಿಕೆಯಿಂದ ಅಪಾರ ಮನ್ನಣೆ ಗಳಿಸಿದ್ದರು.
ರಾಷ್ಟ್ರಪತಿಯಾಗಿದ್ದಾಗ ಅವರು ಹಲವು ದೇಶಗಳಿಗೆ ಸೌಹಾರ್ದ ಭೇಟಿ ಕೊಡಬೇಕಾಗುತ್ತಿತ್ತು. ಆ ಸಂದರ್ಭದಲ್ಲಿ ಸಾಕಷ್ಟು ಉಡುಗೊರೆಗಳು ಬರುವುದು ಸ್ವಾಭಾವಿಕ. ಆ ಉಡುಗೊರೆಗಳನ್ನು ತೆಗೆದುಕೊಳ್ಳಲು ಮನಸ್ಸಿಲ್ಲದಿದ್ದರೂ, ಇದರಿಂದ ಎರಡೂ ದೇಶಗಳಿಗೆ ಮುಜುಗರವಾಗ ಬಹುದೆಂದು ಅವುಗಳನ್ನು ತೆಗೆದುಕೊಳ್ಳುತ್ತಿದ್ದರಂತೆ. ಆದರೆ, ದೇಶಕ್ಕೆ ಹಿಂದಿರುಗಿದ ನಂತರ ಅವುಗಳ ಫೋಟೊ ತೆಗೆದು ಕ್ಯಾಟ್ ಲಾಗ್ ಮಾಡಿಕೊಂಡು, ಉಡುಗೊರೆಗಳನ್ನು ರಾಷ್ಟ್ರಪತಿ ಭವನದ ಸಂಗ್ರಹಾಲಯಕ್ಕೆ ಕಳುಹಿಸುತ್ತಿದ್ದರಂತೆ. ಅವುಗಳಿಂದ ಅವರು ಒಂದು ಸಣ್ಣ ಪೆನ್ಸಿಲ್‌ನ್ನು ಕೂಡಾ ತೆಗೆದುಕೊಳ್ಳಲಿಲ್ಲವಂತೆ.
ರಾಷ್ಟ್ರಪತಿಯಾದ ಮೊದಲ ವರ್ಷ, ಸೆಲೆಬ್ರಿಟಿಗಳಿಗೆ, ರಾಜಕಾರಣಿಗಳಿಗೆ ಮತ್ತು ಕೆಲವರು ಉಳ್ಳವರಿಗೆ ಇಫ್ತಾರ್ ಪಾರ್ಟಿ ಕೊಡುವ ಸಂದರ್ಭ ಬಂದಾಗ, ಅದಕ್ಕೆ ತಗಲುವ ವೆಚ್ಚದ ಬಗೆಗೆ ವಿಚಾರಿಸಿ,ಆ ಹಣವನ್ನು ಅನಾಥಾಲಯಗಳಲ್ಲಿರುವ ಬಡವರಿಗೆ, ವಸ್ತ್ರ, ಹೊದಿಕೆ ಮತ್ತು ಊಟಕೊಡಲು ಸೂಚಿಸಿದ್ದರಂತೆ ಮತ್ತು ತಮ್ಮ ವೈಯಕ್ತಿಕ ಉಳಿತಾಯ ಖಾತೆಯಿಂದ ಒಂದು ಲಕ್ಷರೂಪಾಯಿಯನ್ನೂ ಅದಕ್ಕೆ ಸೇರಿಸಿದ್ದರಂತೆ. ಈ ವಿಷಯವನ್ನು ಹೊರಗೆಡಹದಂತೆ ಸೂಚಿಸಿದ್ದರಂತೆ ಕೂಡಾ. ಅವರು ಕಟ್ಟಾ (devout) ಮುಸ್ಲಿಮ್ ಆದರೂ ರಾಷ್ಟ್ರಪತಿ ಭವನದಲ್ಲಿರುವವರೆಗೆ ಇಫ್ತಾರ್ ಪಾರ್ಟಿ ನೀಡಲಿಲ್ಲವಂತೆ.
ಅವರಿಗೆ ‘‘ಯಸ್ ಸರ್’’ ರೀತಿಯ ಜನರ ಬಗೆ ಅಲರ್ಜಿ ಇತ್ತಂತೆ. ಒಮ್ಮೆ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಾಧೀಶರೊಡನೆ ಚರ್ಚಿಸುತ್ತಿರುವಾಗ, ಕಲಾಂರು ತಮ್ಮ ಕಾರ್ಯದರ್ಶಿಯನ್ನು,do you agree ಎಂದು ಕೇಳಿದಾಗ, ಕಾರ್ಯದರ್ಶಿ. ‘‘ನೋ’’ ಎಂದರಂತೆ. ಇದನ್ನು ನೋಡಿ ನ್ಯಾಯಾಧೀಶರು ತಬ್ಬಿಬ್ಬಾದರಂತೆ. ದೇಶದ ರಾಷ್ಟ್ರಪತಿಯವರ ಅಭಿಪ್ರಾಯವನ್ನು ಸಿವಿಲ್ ಸರ್ವಂಟ್‌ನೊಬ್ಬ ಹೀಗೆ ಒಪ್ಪದಿರಬಹುದೇ? ಎಂದು ಅಚ್ಚರಿಪಟ್ಟರಂತೆ.
ಒಮ್ಮೆ ಅವರು ತಮ್ಮ 50 ಸಂಬಂಧಿಗಳನ್ನು ತಮ್ಮ ಊರಿನಿಂದ ರಾಷ್ಟ್ರಪತಿ ಭವನಕ್ಕೆ ಕರೆಸಿಕೊಂಡಿದ್ದರಂತೆ. ಅವರಿಗಾಗಿ ದಿಲ್ಲಿ ವೀಕ್ಷಣೆಗಾಗಿ ಒಂದು ಬಸ್ಸನ್ನು ಏರ್ಪಡಿಸಿದ್ದು, ಅವರಿಗಾಗಿ ಯಾವುದೇ ಸರಕಾರಿ ವಾಹನವನ್ನು ಉಪಯೋಗಿಸಲಿಲ್ಲವಂತೆ. ಅವರ ಊಟ ವಸತಿ ಮತ್ತು ದಿಲ್ಲಿ ವೀಕ್ಷಣೆ ವೆಚ್ಚವನ್ನು ನಿಖರವಾಗಿ ಲೆಕ್ಕಹಾಕಿ ತಮ್ಮ ವೈಯಕ್ತಿಕ ಖಾತೆಯಿಂದ ಎರಡು ಲಕ್ಷವನ್ನು ಕೊಟ್ಟರಂತೆ.
ಕಲಾಂರ ಸಹೋದರನೊಬ್ಬ ಒಂದು ವಾರಗಳ ಕಾಲ ರಾಷ್ಟ್ರಪತಿಗಳ ಕೋಣೆಯಲ್ಲಿ ಉಳಿಯಲು,ಅವರು ತೆರಳಿದ ನಂತರ, ಕಲಾಂರವರು ಬಾಡಿಗೆ ಕೊಡಲು ಮುಂದಾಗಿದ್ದರಂತೆ. ಆದರೆ, ರಾಷ್ಟ್ರಪತಿ ಭವನದ ಸಿಬ್ಬಂದಿ ಅದನ್ನು ಸ್ವೀಕರಿಸಲು ಮುಜುಗರ ಪಟ್ಟು ನಿರಾಕರಿಸಿದರಂತೆ.
ತಮ್ಮ ಅಧಿಕಾರ ಅವಧಿಯ ಕೊನೆಯ ದಿನಗಳಲ್ಲಿ, ತಮ್ಮ ಕಾರ್ಯದರ್ಶಿಯು ಅನಾರೋಗ್ಯದಿಂದ ತಮ್ಮನ್ನು ಕಾಣಲು ಬರದಿದ್ದಾಗ, ಅವರೇ ಸ್ವತಃ ಅವರ ಮನೆಗೆ ಹೋಗಿ ಅವರ ಯೋಗ ಕ್ಷೇಮವನ್ನು ವಿಚಾರಿಸಿದ್ದರಂತೆ. ದೇಶದ ರಾಷ್ಟ್ರಪತಿಯೊಬ್ಬರು ತಮ್ಮ ಸಿಬ್ಬಂದಿಯ ಮನೆಗೆ ಈ ರೀತಿಹೋಗುವುದನ್ನು ನಮ್ಮ ದೇಶದಲ್ಲಿ ಕನಸಿನಲ್ಲಾದರೂ ಕಾಣಲು ಸಾಧ್ಯವೇ? ಅವರ ಕಿರಿಯ ಸಹೋದರ ಇನ್ನೂ ಕೂಡಾ ತಮ್ಮ ಊರಿನಲ್ಲಿ ಕೊಡೆ ದುರಸ್ತಿ ಅಂಗಡಿಯನ್ನು ನಡೆಸುತ್ತಿದ್ದಾರಂತೆ.
ಅಧಿಕಾರ ಇರುವುದೇ ಅನುಭವಿಸಲು, ನಂತರ ಅದು ತಮ್ಮವರಿಗೆ ಮತ್ತು ಅಧಿಕಾರ ಅವಧಿಯಲ್ಲಿ ಆದಷ್ಟು ಗಳಿಸಿ ಕೂಡಿ ಹಾಕುವುದೇ ಮುಖ್ಯ ಎನ್ನುವ ಕಾಲದಲ್ಲಿ, ಡಾ.ಅಬ್ದುಲ್ ಕಲಾಂನಂಥವರೂ ಇರುತ್ತಾರೆ ಎನ್ನುವುದು ದೇಶ ಹೆಮ್ಮೆ ಪಡುವ ವಿಷಯ. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಮೈಸೂರು ದಿವಾನರಾಗಿದ್ದಾಗ, ಸ್ವಂತದ ಕೆಲಸ ಮಾಡುವಾಗ ಸರಕಾರದ ದೀಪವನ್ನು ಆರಿಸಿ ಮನೆ ದೀಪವನ್ನು ಹಚ್ಚಿಕೊಳ್ಳುತ್ತಿದ್ದರಂತೆ. ಇಂಥಹ ಆದರ್ಶಗಳು ಈಗ ಇತಿಹಾಸದ ಪುಟದಲ್ಲಿ ಮಾತ್ರ ಸಿಗಬಹುದು.
ತಮಿಳು ವಾಹಿನಿಯೊಂದರಲ್ಲಿ ಪ್ರಸಾರವಾದ ಈ ಮಾಹಿತಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿಯುವುದನ್ನು ನೋಡಿದಾಗ, ಕಲಾಂ ಬಗೆಗೆ ಗೌರವ ನೂರು ಪಟ್ಟು ಹೆಚ್ಚುತ್ತದೆ ಮತ್ತು ಈ ಸಂತತಿ ನಶಿಸುತ್ತಿರುವ ಬಗೆಗೆ ದುಃಖವಾಗುತ್ತದೆ ಕೂಡಾ. ಸರಳತೆ ಮತ್ತು ಸಜ್ಜನಿಕೆಗೆ ಇನ್ನೊಂದು ಹೆಸರಾದ ಡಾ. ಅಬ್ದುಲ್ ಕಲಾಂ ಹೆಸರು ಈ ದೇಶದ ಪ್ರಜ್ಞಾವಂತರಲ್ಲಿ ಸದಾ ನೆನಪಿಲ್ಲಿರಲು ಇನ್ನೇನು ಕಾರಣ ಬೇಕು?







