ಸರಕಾರಿ ಸೇವೆಗೆ ಗೈರು, ಖಾಸಗಿ ಆಸ್ಪತ್ರೆಯಲ್ಲಿ ಹಾಜರು ! ಆಮೇಲೆ ಏನಾಯ್ತು ಓದಿ...

ಶಿವಮೊಗ್ಗ, ಮಾ. 25: ಸರಕಾರಿ ಆಸ್ಪತ್ರೆ ಸೇವೆಗೆ ಗೈರಾಗಿ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಆರೋಪದ ಮೇರೆಗೆ ಜಿಲ್ಲೆಯ ಸೊರಬದ ತಾಲೂಕು ಸರಕಾರಿ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಅಮಾನತುಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಕೀಲು ಮತ್ತು ಮೂಳೆ ತಜ್ಞ ಡಾ. ಜನಾರ್ದನ್ ಮೊಗೇರ ಹಾಗೂ ಪ್ರಸೂತಿ ತಜ್ಞ ಡಾ. ನಾಗೇದ್ರಪ್ಪ ಅಮಾನತ್ತುಗೊಂಡ ವೈದ್ಯರೆಂದು ಗುರುತಿಸಲಾಗಿದೆ. ಈ ಇಬ್ಬರು ವೈದ್ಯರು ಸರಕಾರಿ ಸೇವೆಗೆ ಸಮರ್ಪಕವಾಗಿ ಆಗಮಿಸದೆ, ಖಾಸಗಿ ಆಸ್ಪತ್ರೆಗಳನ್ನು ತೆರೆದುಕೊಂಡು ಕಾರ್ಯನಿರ್ವಹಿಸುತ್ತಿರುವ ಕುರಿತಂತೆ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸಭೆಯಲ್ಲಿ ಚರ್ಚೆಯಾಗಿತ್ತು. ಜೊತೆಗೆ ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿತ್ತು.
ಕರ್ತವ್ಯ ಲೋಪ ಹಾಗೂ ಸಾರ್ವಜನಿಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಈ ಇಬ್ಬರು ವೈದ್ಯರ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಜಿಲ್ಲಾ ನೋಡಲ್ ಅಧಿಕಾರಿಗೆ ಸೂಚನೆ ನೀಡಲಾಗಿತ್ತು. ನೋಡಲ್ ಅಧಿಕಾರಿಯು ಈ ಇಬ್ಬರು ವೈದ್ಯರ ವಿರುದ್ಧ ವರದಿ ಸಲ್ಲಿಸಿದ್ದರು. ಈ ವರದಿಯ ಆಧಾರದ ಮೇಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾದ ಸುಬೋಧ್ ಯಾದವ್‌ರವರು ಅಮಾನತ್ತು ಆದೇಶ ಹೊರಡಿಸಿದ್ದಾರೆ.
ಆರೋಪವೇನು?:
ಪ್ರಸೂತಿ ತಜ್ಞರಾದ ಡಾ. ನಾಗೇಂದ್ರಪ್ಪರವರು ತಮ್ಮದೆ ಆದ ಸುಧನ್ಯ ಮೆಟರ್ನಿಟಿ ಮತ್ತು ಸುಧನ್ಯ ಆಸ್ಪತ್ರೆ ತೆರೆದಿದ್ದರು. ಹಾಗೆಯೇ ಕೀಳು ಮತ್ತು ಮೂಳೆ ತಜ್ಞ ಡಾ. ಜನಾರ್ದನ್‌ರವರು ಕೂಡ ಆಸ್ಪತ್ರೆ ತೆರೆದುಕೊಂಡಿದ್ದರು. ಈ ಇಬ್ಬರು ವೈದ್ಯರು ಸರಕಾರಿ ಸೇವೆಗೆ ಸಮರ್ಪಕವಾಗಿ ಹಾಜರಾಗದೆ, ತಮ್ಮ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದ ಆರೋಪವಿತ್ತು.







