ಕುಡಿಯುವ ನೀರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ: ಅಭಯಚಂದ್ರ ಜೈನ್
ಮಂಗಳೂರು ತಾಲೂಕು ತ್ರೈಮಾಸಿಕ ಕೆಡಿಪಿ ಸಭೆ

ಮಂಗಳೂರು, ಮಾ. 25: ರಾಜ್ಯ ಸರಕಾರ ಮಂಗಳೂರು ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿದೆ. ಹಾಗಾಗಿ ಜನರಿಗೆ ಕುಡಿಯುವ ನೀರಿನ ಯಾವುದೇ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ ನೀರಿನ ಪೂರೈಕೆಗೆ ವ್ಯವಸ್ಥೆ ಮಾಡಬೇಕು. ಕಾನೂನು ಪ್ರಕಾರ ಎಲ್ಲ ಪಂಪ್‌ಸೆಟ್ ಹಾಗೂ ಬೋರ್‌ವೆಲ್‌ಗಳಿಗೆ ಮೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಲ್ಪಿಸಿ ಜನರಿಗೆ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಅಭಯಚಂದ್ರ ಜೈನ್ ಸೂಚನೆ ನೀಡಿದರು.
ಮಂಗಳೂರು ತಾಪಂನಲ್ಲಿ ಶನಿವಾರ ನಡೆದ ತ್ರೈ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಮಂಗಳೂರು ಹಾಗೂ ಮೂಡುಬಿದಿರೆ ತಹಶೀಲ್ದಾರ್ ಪಿಡಿಒಗಳಿಗೆ ಸೂಕ್ತ ನಿರ್ದೇಶನ ನೀಡಿ ಕ್ರಮ ಕೈಗೊಳ್ಳಬೇಕು. ಱಕೆರೆ ಸಂಜೀವಿನಿೞಕಾರ್ಯಕ್ರಮದಡಿ ಕೆರೆಗಳ ಹೂಳೆತ್ತುವ ಕಾರ್ಯ ಶೀಘ್ರದಲ್ಲಿ ನಡೆಯಬೇಕು. ಪಿಡಿಒಗಳು ಅಭಿವೃದ್ಧಿ ಕೆಲಸಗಳನ್ನು ಹಾಗೂ ಅಗತ್ಯವಿದ್ದೆಡೆ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲು ಪೂರಕ ಕ್ರಮಕೈಗೊಳ್ಳಬೇಕು. ಸರಕಾರ 100 ಕೋ.ರೂ. ವನ್ನು ಪಶ್ಚಿಮ ವಾಹಿನಿ ಯೋಜನೆಗೆ ಅನುದಾನ ನೀಡುತ್ತಿದ್ದು, ಅದನ್ನು ಸದ್ಭಳಕೆ ಮಾಡಬೇಕು. 1.30 ಕೋ.ರೂ. ಪ್ರತೀ ವಿಧಾನ ಸಭಾ ಕ್ಷೇತ್ರಕ್ಕೆ ಮಂಜೂರಾಗಿದೆ. ಎಲ್ಲ ಕಡೆಗಳಲ್ಲಿ ಪೈಪ್‌ಲೈನ್ ಹಾಕಿಸಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು. ಎಲ್ಲ ಗ್ರಾಪಂಗಳು ಸರಕಾರದ ಯೋಜನೆಗಳನ್ನು ಸದ್ಭಳಕೆ ಮಾಡಬೇಕು ಎಂದರು.
*94ಸಿ-94ಸಿಸಿ: ಸರಕಾರದ ಮಹತ್ವದ ಯೋಜನೆಯಾಗಿರುವ 94ಸಿ ಮತ್ತು 94ಸಿಸಿ ಮುಖ್ಯಮಂತ್ರಿಗಳ ಕನಸಾಗಿದೆ. ಈ ಕುರಿತ ಸಾಕಷ್ಟು ಅರ್ಜಿಗಳ ವಿಲೇವಾರಿಗೆ ಬಾಕಿಯಿದ್ದು, 3 ತಿಂಗಳಲ್ಲಿ ಅಕ್ರಮ-ಸಕ್ರಮಕ್ಕೆ ಬಂದಿರುವ ಅರ್ಜಿಗಳ ವಿಲೇವಾರಿಯನ್ನು ಅಧಿಕಾರಿಗಳು ನಡೆಸಬೇಕು. ಇದರಿಂದ ಜನರಿಗೂ ಸಹಾಯವಾಗುವುದಲ್ಲದೆ, ಕೆಲವು ಅಕ್ರಮಗಳನ್ನು ತಡೆಯಬಹುದು. ಸರಕಾರ ವಿಶೇಷವಾಗಿ ರೂಪಿಸಿರುವ ಯೋಜನೆಗಳು ಜನರಿಗೆ ತಲುಪಿಸುವಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.
ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ ಅಧಿಕಾರಿಯೊಬ್ಬರು ವಿವಿಧ ಯೋಜನೆಯ ಸಾಲ ವಿತರಣೆಯ ಬಗ್ಗೆ ಮಾಹಿತಿ ನೀಡುತ್ತಾ ತಲಾ 2 ತೋಡು ಬಾವಿಗಳು ಹಾಗೂ ಕೊಳವೆ ಬಾವಿಗಳು ವಾರ್ಷಿಕ ಗುರಿಯಾಗಿದೆ. ಅರ್ಜಿ ಹಾಕದ ಕಾರಣ ಆ ಗುರಿ ತಲುಪಲಾಗಿಲ್ಲ ಎಂದರು.
ಕೊಳವೆ ಬಾವಿ ಬೇಡವೆನ್ನುವವರು ಯಾರಿದ್ದಾರೆ? ಸೌಲಭ್ಯಗಳ ಬಗ್ಗೆ ಮಾಹಿತಿಯಿಲ್ಲದಿದ್ದರೆ ಕೃಷಿಕರು ಅರ್ಜಿ ಹೇಗೆ ಸಲ್ಲಿಸುತ್ತಾರೆ. ಸರಕಾರದ ಯೋಜನೆಗಳ ಹಾಗೂ ಅರ್ಹತೆಯ ಬಗ್ಗೆ ತಿಳಿಸುವ ಕೆಲಸ ಮಾಡಬೇಕು ಹಾಗೂ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು. ಕೃಷಿ ಇಲಾಖೆಯ ಜತೆ ಸಂಪರ್ಕವಿಟ್ಟು ಪೂರಕ ಮಾಹಿತಿ ನೀಡಿ ಹಾಗೂ ಯೋಜನೆಗಳು ಶೇ.100ರಷ್ಟು ಸಾಧನೆಯಾಗಬೇಕು ಎಂದು ಅಭಯಚಂದ್ರ ಜೈನ್ ಹೇಳಿದರು.
ಫ್ಯೂಸ್ ಕೊಂಡೊಯ್ಯಬೇಡಿ:
ಲವೆಡೆ ಒಂದೆರಡು ತಿಂಗಳ ಶುಲ್ಕ ಪಾವತಿ ಮಾಡಲು ಬಾಕಿಯಿದ್ದ ಸನ್ನಿವೇಶಗಳಲ್ಲಿ ಬಲವಂತಾಗಿ ಸಂಪರ್ಕ ಕಡಿತ ಮಾಡಿದ ನಿದರ್ಶನಗಳಿವೆ. ಇತರ ಜಿಲ್ಲೆಗಳಿಗೆ ಹೋಲಿಸಿದಾಗ ಜಿಲ್ಲೆಯಲ್ಲಿ ಶೇ. 100ರಷ್ಟು ವಸೂಲಾತಿಯಿದೆ. ಆದರೆ ಬಲವಂತವಾಗಿ ಅವರ ಸಂಪರ್ಕದ ಫ್ಯೂಸ್ ಕೊಂಡೊಯ್ಯುವ ಕೆಲಸವನ್ನು ಅಧಿಕಾರಿಗಳು ನಡೆಸಬಾರದು ಎಂದು ಶಾಸಕ ಮೊಯ್ದಿನ್ ಬಾವಾ ತಾಕೀತು ಮಾಡಿದರು.
ಸಭೆಯಲ್ಲಿ ವಿವಿಧ ಇಲಾಖೆಯ ಯೋಜನೆ, ಮಂಜೂರಾದ ಅನುದಾನ ಹಾಗೂ ಸಾಧನೆಗಳ ಬಗ್ಗೆ ಮಾಹಿತಿ ಪಡೆಯಲಾಯಿತು.
ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಉಪಾಧ್ಯಕ್ಷ ಪೂರ್ಣಿಮಾ ಗಣೇಶ್, ಕಾರ್ಯನಿರ್ವಹಣಾಧಿಕಾರಿ ಜಿ. ಸದಾನಂದ, ಮಂಗಳೂರು ತಹಶೀಲ್ದಾರ್ ಮಹಾದೇವಯ್ಯ, ಮೂಡುಬಿದಿರೆ ತಹಶೀಲ್ದಾರ್ ಮುಹಮ್ಮದ್ ಇಸಾಕ್ ಮತ್ತಿತರರು ಉಪಸ್ಥಿತರಿದ್ದರು.







