ಎಬಿವಿಪಿ ಬೆಂಬಲಿಗರಿಂದ ದಲಿತ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ
► ದಲಿತ ವಿದ್ಯಾರ್ಥಿಗಳ ಮೇಲೆ ಹಲ್ಲೆ, ಜಾತಿನಿಂದನೆ ► ಎಬಿವಿಪಿ ಕಾರ್ಯಕರ್ತರ ಬೆದರಿಕೆಗೆ ದೂರು ಹಿಂಪಡೆದ ವಿದ್ಯಾರ್ಥಿನಿ
ತಿರುವನಂತಪುರಂ,ಮಾ.24: ಇಲ್ಲಿನ ಎಂಜಿ ಕಾಲೇಜ್‌ನಲ್ಲಿ ದಲಿತ ವಿದ್ಯಾರ್ಥಿಗಳ ಮೇಲೆ ಎಬಿವಿಪಿ ದಬ್ಬಾಳಿಕೆ ನಡೆಸುತ್ತಿದೆಯೆಂದು ಆರೋಪಿಸಿ 35 ಮಂದಿ ದಲಿತ ವಿದ್ಯಾರ್ಥಿಗಳು ಲಿಖಿತ ದೂರನ್ನು ನೀಡಿದ್ದಾರೆ. ಕಳೆದ ಮಂಗಳವಾರ ಎಬಿವಿಪಿ ಕಾರ್ಯಕರ್ತರು, ಇಬ್ಬರು ದಲಿತ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಕೆಲವು ದಲಿತ ವಿದ್ಯಾರ್ಥಿನಿಯರು ಪ್ರಾಂಶುಪಾಲರಿಗೆ ದೂರು ನೀಡಿದ್ದರು. ಎಬಿವಿಪಿ ಸದಸ್ಯರು ದಲಿತ ವಿದ್ಯಾರ್ಥಿಗಳ ಜಾತಿನಿಂದನೆ ಮಾಡಿದ್ದು, ಲಿಂಗತಾರತಮ್ಯದ ಬೈಗುಳಗಳನ್ನು ಕೂಡಾ ಆಡಿದ್ದಾರೆಂದು ದೂರಿನಲ್ಲಿ ಅವರು ಆರೋಪಿಸಿದ್ದುರ.
‘‘ಕುರವಾ ಹಾಗೂ ಪುಲಯ ಸಮುದಾಯದ ವಿದ್ಯಾರ್ಥಿಗಳು ಇಲ್ಲಿ ಕಲಿಯುವ ಅಗತ್ಯವಿಲ್ಲ. ಇದು ನಾಯರ್‌ಗಳಿಗೆ ಸೇರಿದ ಕಾಲೇಜಾಗಿದೆ’’ ಎಂದು ಎಬಿವಿಪಿ ಬೆಂಬಲಿಗರು ನಿಂದಿಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ. ದಲಿತ ವಿದ್ಯಾರ್ಥಿನಿಯರ ದೂರಿನ ಹಿನ್ನೆಲೆಯಲ್ಲಿ ಎಬಿವಿಪಿ ಕಾರ್ಯಕರ್ತರಾದ ಹರಿಲಾಲ್,ಶಿಜು ಹಾಗೂ ಆನಂತು ನಾಯರ್ ಅವರನ್ನು ಕಾಲೇಜು ಪ್ರಾಂಶುಪಾಲರು ಅಮಾನತುಗೊಳಿಸಿದ್ದಾರೆ.
ಘಟನೆಯ ಬಗ್ಗೆ ತನಿಖೆ ನಡೆಸಿರುವ ಶಿಕ್ಷಕರ ಸಂಘವು ಸಲ್ಲಿಸಿದ ವರದಿಯೂ ಕೂಡಾ ದೂರಿನ ಸಿಂಧುತ್ವವನ್ನು ಎತ್ತಿಹಿಡಿದಿದೆ. ವರದಿಯನ್ನು ಲೈಂಗಿಕ ಕಿರುಕುಳ ವಿರೋಧಿ ಸಮಿತಿಗೆ ವರ್ಗಾಯಿಸಿದೆ. ಮಹಿಳಾ ಪ್ರೊಫೆಸರನ್ನೊಳಗೊಂಡಿದ್ದ ಸಮಿತಿಯು ಸಂತ್ರಸ್ತ ವಿದ್ಯಾರ್ಥಿನಿಯರನ್ನು ಭೇಟಿಯಾಗಿತ್ತು. ಆದರೆ ಓರ್ವ ದಲಿತ ವಿದ್ಯಾರ್ಥಿನಿ ತನ್ನ ದೂರನ್ನು ಹಿಂತೆಗೆದುಕೊಂಡಿದ್ದಳು. ಆರೆಸ್ಸೆಸ್ ಬೆಂಬಲಿಗರಿಂದ ನಿರಂತರವಾಗಿ ಬೆದರಿಕೆ ಬರುತ್ತಿದ್ದುದೇ ಆಕೆ ದೂರನ್ನು ಹಿಂತೆಗೆದುಕೊಳ್ಳಲು ಕಾರಣವೆಂದು ಆಕೆಯ ಸ್ನೇಹಿತೆಯರು ತಿಳಿಸಿದ್ದಾರೆ. ಆದಾಗ್ಯೂ ಲೈಂಗಿಕ ಕಿರುಕುಳ ವಿರೋಧಿ ಸಮಿತಿಯು ದೂರನ್ನು ಪೊಲೀಸ್ ಇಲಾಖೆಗೆ ವರ್ಗಾಯಿಸಲು ನಿರ್ಧರಿಸಿತ್ತು. ಇದನ್ನು ಪ್ರತಿಭಟಿಸಿ ಎಂಜಿ ಕಾಲೇಜ್‌ನ ಎಬಿವಿಪಿ ಬೆಂಬಲಿಗರು ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.
ಕಾಲೇಜ್‌ನ ಮ್ಯಾನೇಜ್‌ಮೆಂಟ್ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್, ಎಂಜಿ ಕಾಲೇಜ್‌ನಲ್ಲಿ ಎಬಿವಿಪಿಯ ಚಟುವಟಿಕೆಯನ್ನು ನಿಷೇಧಿಸಿತ್ತು. ಆದರೆ ಹೈಕೋರ್ಟ್ ಆದೇಶವನ್ನ್ನು ಉಲ್ಲಂಘಿಸಿ ಎಬಿವಿಪಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದೆ.
ಎಂಜಿ ಕಾಲೇಜ್‌ನ ವಿದ್ಯಾರ್ಥಿ ಒಕ್ಕೂಟವು 1989ರಿಂದೀಚೆಗೆ ಎಬಿವಿಪಿಯ ಹಿಡಿತದಲ್ಲಿದೆ. ಎಸ್‌ಎಫ್‌ಐ ಹಾಗೂ ಕೆಎಸ್‌ಯು ವಿದ್ಯಾರ್ಥಿ ಘಟಕಗಳು ಈ ಕಾಲೇಜ್‌ನಲ್ಲಿ ಕಾರ್ಯಾಚರಿಸುತ್ತಿಲ್ಲ.