2024ರಲ್ಲಿ ಮೋದಿಯಲ್ಲ, ಆದಿತ್ಯನಾಥ್ ದೇಶದ ಪ್ರಧಾನಿಯಾಗುವುದನ್ನು ಬಯಸುತ್ತೇವೆ : ಉ.ಪ್ರ ಸಿಎಂ ಬೆಂಬಲಿಗರ ಹೇಳಿಕೆ

ಗೊರಕ್‌ಪುರ,ಮಾ. 25: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೋರಕ್‌ಪುರಕ್ಕೆ ಭೇಟಿ ನೀಡುವ ಮೊದಲೇ ಅಲ್ಲಿ ಅವರ ಬೆಂಬಲಿಗರು ಬಹಳ ಸಂತಸದಿಂದಿದ್ದಾರೆ.
ಮುಂದಿನ ಏಳು ವರ್ಷದ ಬಳಿಕ ಆದಿತ್ಯನಾಥ್‌ರನ್ನು ಪ್ರಧಾನಿಯ ಸ್ಥಾನದಲ್ಲಿ ನೋಡಲು ಅವರು ಬಯಸುತ್ತಿದ್ದಾರೆ. ಅದಕ್ಕಾಗಿ ಈಗಲೇ ಅವರು ಘೋಷಣೆ ಕೂಗತೊಡಗಿದ್ದಾರೆ.
ಆಂಗ್ಲ ವೆಬ್‌ಸೈಟ್ ಇಂಡಿಯಟುಡೆಯ ಪ್ರಕಾರ ಯೋಗಿ ಆದಿತ್ಯನಾಥ್ ಗೊರಕ್‌ಪುರ ತಲುಪುವ ಮೊದಲೇ ಗೊರಕ್‌ನಾಥ್ ಮಂದಿರದಲ್ಲಿ ಅವರ ನೂರಾರು ಬೆಂಬಲಿಗರು ಸೇರಿದ್ದರು. ಗೊರಕ್‌ಪುರದ ಆದಿತ್ಯನಾಥರ ಒಬ್ಬ ಬೆಂಬಲಿಗ," ಯೋಗೀಜಿ ಉತ್ತರಪ್ರದೇಶದಲ್ಲಿ ಯಾವ ರೀತಿ ಕೆಲಸ ಆರಂಭಿಸಿದ್ದಾರೆ. ಅದರಲ್ಲಿ ನಮಗೆ ತುಂಬ ಸಂತೋಷವಿದೆ. ಅವರನ್ನು 2024ರಲ್ಲಿ ಯೋಗಿ ದೇಶದ ಪ್ರಧಾನಿಯಾಗುವುದನ್ನು ನೋಡಲು ಬಯಸುತ್ತೇವೆ" ಎಂದು ಹೇಳಿದ್ದಾನೆ.
ಉತ್ತರಪ್ರದೇಶದಲ್ಲಿ ಯೋಗಿಯ ಕ್ರಮಗಳು ಮೋದಿಯಂತೆ ಅವರ ಅಭಿಮಾನಿಗಳಲ್ಲಿ ವಿಶ್ವಾಸ ಮೂಡಿಸಿದೆ. ಆದ್ದರಿಂದ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತಮ ಪ್ರಧಾನಿ ಅಭ್ಯರ್ಥಿ ಎಂದು ಬೆಂಬಲಿಗರು ಭಾವಿಸುತ್ತಿದ್ದಾರೆ.
ಉತ್ತರಪ್ರದೇಶದ ಇತ್ತೀಚೆಗಿನ ಚುನಾವಣೆಯಲ್ಲಿ ಬಿಜೆಪಿಗೆ ಸಿಕ್ಕ ಯಶಸ್ಸಿನಿಂದ 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಗೆಲ್ಲುವುದು ಶತಸಿದ್ಧ ಎಂದು ಬಿಜೆಪಿ ನಂಬಿದೆ. ಆದ್ದರಿಂದ ನರೇಂದ್ರಮೋದಿ ಮುಂದಿನ ಅವಧಿಗೂ ತಾನೇ ಪ್ರಧಾನಿಯಾಗುವೆ ಎನ್ನುವ ಸೂಚನೆ ನೀಡಿದ್ದಾರೆ. ಯೋಗಿ ಆದಿತ್ಯನಾಥ್‌ರು ಇಂದು (ಮಾರ್ಚ್ 25) ಗೊರಕ್‌ಪುರಕ್ಕೆ ಎರಡು ದಿನಗಳ ಭೇಟಿಗೆ ತೆರಳಿದ್ದಾರೆ.
" ಆದಿತ್ಯನಾಥ್ ಪ್ರಧಾನಿಮೋದಿಯ ರೀತಿ ಕೆಲಸ ಆರಂಭಿಸಿದ್ದಾರೆ. ಅವರು ಕೂಡಾ ಪ್ರಧಾನಿಯಂತೆ ಒಂಟಿಯಾಗಿದ್ದಾರೆ. ಆದ್ದರಿಂದ ಅವರಿಗೆ ಕುಟುಂಬ ವ್ಯಾಮೋಹಗಳಿಲ್ಲ ಮತ್ತು ಭ್ರಷ್ಟಾಚಾರದಲ್ಲಿ ಶಾಮೀಲಾಗಲಾರರು. ಯೋಗಿ ಮೊದಲು ರಾಜ್ಯದ ಸೇವೆ ಮಾಡಲಿದ್ದಾರೆ. ನಂತರ ದೇಶದ ಸೇವೆ ಮಾಡಲಿದ್ದಾರೆ" ಎಂದು ಯೋಗಿ ಆದಿತ್ಯನಾಥ್‌ರ ಬೆಂಬಲಿಗರು ಗೊರಕ್ ಪುರದಲ್ಲಿ ಹೇಳುತ್ತಿದ್ದಾರೆ.







