ನ್ಯಾಯಾಲಯದ ಮೂರನೆ ಮಹಡಿಯಿಂದ ಜಿಗಿದು ಹೆಡ್ ಕಾನ್ಸ್‌ಟೇಬಲ್ ಆತ್ಮಹತ್ಯೆ ಯತ್ನ; ಚಿಕಿತ್ಸೆ ವೇಳೆ ಹೃದಯಾಘಾತದಿಂದ ಸಾವು

ಮಂಗಳೂರು, ಮಾ. 25: ಪೋಕ್ಸೊ ಕಾಯ್ದೆಯಡಿ ಬಂಧಿಸಲ್ಪಟ್ಟಿದ್ದ ಬಜ್ಪೆ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಪ್ರವೀಣ್ ಎಂಬಾತನನ್ನು ನಗರದ ಎರಡನೆ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ನ್ಯಾಯಾಲಯದ ನಾಲ್ಕನೆ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ.
ಮಹಡಿಯಿಂದ ಹಾರಿ ಗಾಯಗೊಂಡ ಪ್ರವೀಣ್‌ನನ್ನು ತಕ್ಷಣ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಪ್ರವೀಣ್ ವಿವಾಹಿತ ಮಹಿಳೆ ಹಾಗೂ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ಎದುರಿಸುತ್ತಿದ್ದ. ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈತ ತನ್ನ ಮನೆ ಪಕ್ಕದ ಮನೆಯಲ್ಲಿ ಮಹಿಳೆಯೊಬ್ಬರು ಸ್ನಾನ ಮಾಡುತ್ತಿರುವುದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದುದಲ್ಲದೆ, ಮಹಿಳೆಯ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಈತನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಮೂಲತಃ ಮಂಜೇಶ್ವರ ನಿವಾಸಿಯಾಗಿದ್ದ ಪ್ರವೀಣ್ ಸುಂಕದಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಈ ಹಿಂದೆಯೂ ಈತನ ವಿರುದ್ಧ ಮಹಿಳೆ ಸ್ನಾನ ಮಾಡುತ್ತಿದ್ದಾಗ ಮೊಬೈಲ್ ಸೆರೆ ಹಿಡಿಯುತ್ತಿದ್ದ ಬಗ್ಗೆ ಕ್ರಮಕ್ಕಾಗಿ ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಆಗ ಪ್ರವೀಣನಿಗೆ ಪೊಲೀಸ್ ಅಧಿಕಾರಿಗಳು ಬುದ್ಧಿಮಾತು ಹೇಳಿ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.
ಆದರೆ ಪ್ರವೀಣ್ ತನ್ನ ಚಾಳಿ ಬಿಟ್ಟಿರಲಿಲ್ಲ. ಕಳೆದ ರಾತ್ರಿ ಕೂಡ ಮಹಿಳೆ ಸ್ನಾನ ಮಾಡುತ್ತಿದ್ದಾಗ ಮೊಬೈಲ್‌ನಲ್ಲಿ ಚಿತ್ರೀಕರಿಸಲು ಮುಂದಾಗಿದ್ದ. ಅದನ್ನು ನೋಡಿದ ಆಕೆಯ ಪುತ್ರಿ ತಾಯಿಗೆ ಮಾಹಿತಿ ನೀಡಿದ್ದಳು. ಶನಿವಾರ ಈ ಬಗ್ಗೆ ಮಹಿಳೆ ಬಜಪೆ ಠಾಣಾಧಿಕಾರಿಗೆ ದೂರು ನೀಡಿದ್ದಳು. ಆರೋಪಿ ಬಾಲಕಿಗೂ ಲೈಂಗಿಕ ಕಿರುಕುಳ ನೀಡಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೇದೆ ಪ್ರವೀಣ್‌ನ ವಿರುದ್ಧ ಪೋಸ್ಕೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿತ್ತು.
ಪ್ರವೀಣ್‌ನನ್ನು ಶನಿವಾರ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಆರೋಪಿಯನ್ನು 3ನೆ ಮಹಡಿಯಲ್ಲಿರುವ 2ನೆ ಹೆಚ್ಚುವರಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು. ಆದರೆ 3ನೆ ಮಹಡಿಯಲ್ಲಿ ಲಿಫ್ಟ್ ನಿಲ್ಲದೆ ನಾಲ್ಕನೆ ಮಹಡಿಗೆ ಬಂದಿತ್ತು. ಲಿಫ್ಟ್ ನಿಂದ ಹೊರಬಂದ ಪ್ರವೀಣ್ ಏಕಾಏಕಿ ಮೆಟ್ಟಲಿನಿಂದ ಎರಡನೆ ಮಹಡಿಯ ಮೆಟ್ಟಲಿಗೆ ಜಿಗಿದಿದ್ದರು. ಗಾಯಗೊಂಡಿದ್ದ ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







