ಉ.ಪ್ರ ದಲ್ಲಿ ಮುಸ್ಲಿಮರಿಗೆ ಬೆದರಿಕೆ ಪೋಸ್ಟರ್
ನಮ್ಮ ಸರಕಾರ ಬಂದಿದೆ, ನಮಾಝ್ ಮಾಡುವಾಗ ಧ್ವನಿವರ್ಧಕ ಬಳಸಬಾರದು ಇಲ್ಲದಿದ್ದರೆ ನಮಾಝ್ ಮಾಡಲು ಬಿಡಲಾರೆವು

ಬರೇಲಿ,ಮಾ. 25: ಉತ್ತರಪ್ರದೇಶದ ಬರೇಲಿಯಲ್ಲಿ ಮುಸ್ಲಿಮರು ಮನೆಬಿಟ್ಟು ಹೋಗಬೇಕೆಂದು ಪೋಸ್ಟರ್ ಅಂಟಿಸಿದ ಘಟನೆ ತಣ್ಣಗಾಗುವ ಮೊದಲೇ ಮತ್ತೊಂದು ಮುಸ್ಲಿಮ್ ವಿರೋಧಿ ಬರಹ ಕಂಡು ಬಂದಿದೆ. ಬರೇಲಿ ಜಿಯಾನಾಗಾಲ ಗ್ರಾಮದ ಸುಭಾಶ್ ನಗರದ ಕಾರಗೌನದ ಎರಡು ಮಸೀದಿಗಳ ಬಳಿ ನೋಟಿಸು ಕಾಣಸಿಕ್ಕಿದೆ.
ಮುಸ್ಲಿಮರು ನಮಾಝ್ ಮಾಡುವಾಗ ಧ್ವನಿವರ್ಧಕ ಬಳಸುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ನಮಾಝ್ ಮಾಡಲು ಬಿಡಲಾರೆವು. ಇದು ನಮ್ಮ ಕೇವಲ ಬೆದರಿಕೆಯೆಂದು ತಿಳಿಯಬೇಡಿರಿ ಎಂದು ನೋಟಿಸ್ ನಲ್ಲಿ ಬರೆಯಲಾಗಿದೆ. ಈ ನೋಟಿಸು (ಬರಹ) ಸುಭಾಶ್ ನಗರದಲ್ಲಿ ಮಸೀದಿ ಬಳಿ ಗುರುವಾರ ರಾತ್ರಿ ವೇಳೆ ಎಸೆಯಲಾಗಿತ್ತು. ಶುಕ್ರವಾರ ಬೆಳಗ್ಗೆ ಮಸೀದಿ ತೆರೆದಾಗ ಇದು ಸಂಬಂಧಿಸಿದವರಿಗೆ ಕಂಡು ಬಂದಿದೆ. ಸುಭಾಶ್ ನಗರದ ಕಾರಗೌನದಲ್ಲಿನ ಹೊಸ ಮಸೀದಿ ಮತ್ತು ಹಳೆಯ ಮಸೀದಿಗಳೆರಡರಕ್ಕೂ ದುಷ್ಕರ್ಮಿಗಳು ಇಂತಹ ನೋಟಿಸುಗಳನ್ನು ಎಸೆದಿದ್ದಾರೆ.
ನೋಟಿಸಿನಲ್ಲಿ ಹೀಗೆ ಬರೆಯಲಾಗಿದೆ " ಮುಸ್ಲಿಮರೇ ಈಗ ಸರಿಯಾಗಿ ಬದುಕಲು ಕಲಿಯಿರಿ. ನಮ್ಮ ಸರಕಾರ ಬಂದಿದೆ. ಇನ್ನು ಮಸೀದಿಯಲ್ಲಿ ನಮಾಝ್ ಮಾಡುವಾಗ ಧ್ವನಿವರ್ಧಕ ಬಳಸಬಾರದು. ಬಳಕೆ ಮಾಡಿದರೆ ನಮಾಝ್ ಮಾಡಲು ಬಿಡಲಾರೆವು.ಇದನ್ನು ಬರೇ ಒಂದು ಬೆದರಿಕೆ ಎಂದು ತಿಳಿಯಬೇಡಿರಿ"
ನಗರ ಪೊಲೀಸ್ ಮುಖ್ಯಸ್ಥ ಸಮೀರ್ ಸೌರಭ್‌ರು ಫಟನೆಯ ಕುರಿತುಪ್ರತಿಕ್ರಿಯಿಸಿ, " ಮಸೀದಿಯ ಬಳಿ ಪ್ರಚೋದನಾತ್ಮಕ ನೋಟಿಸು ಎಸೆದಿರುವ ದೂರು ಬಂದಿದೆ. ಈ ಬಗ್ಗೆ ಅಜ್ಞಾತ ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸ್ ಇಲಾಖೆ ಆರೋಪಿಗಳನ್ನು ಶೀಘ್ರ ಬಂಧಿಸಲಿದೆ" ಎಂದು ಹೇಳಿದ್ದಾರೆ.
ಈ ಹಿಂದೆ ಬರೇಲಿ ಜಿಲ್ಲೆಯ ಇದೇ ಗ್ರಾಮದಲ್ಲಿ ಮುಸ್ಲಿಮರು ಮನೆ ತೊರೆದು ಹೋಗಬೇಕೆಂದು ಬೆದರಿಕೆಯೊಡ್ಡಿದ ಪೋಸ್ಟರ್ ಅಂಟಿಸಲಾಗಿತ್ತು. ದುಷ್ಕರ್ಮಿಗಳ ಬಂಧನಕ್ಕಾಗಿ ಪೊಲೀಸರು ಎರಡು ತಂಡಗಳನ್ನು ನಿಯೋಜಿಸಿದ್ದರು. ಬರೇಲಿಯಿಂದ ಎಪ್ಪತ್ತು ಕಿಲೊಮೀಟರ್ ದೂರದ ಜಿಯಾನಾಗಾಲದ ಓರ್ವಗ್ರಾಮಸ್ಥ ತಮ್ಮ ಮನೆಗೋಡೆಗೆ ಹಿಂದಿಯಲ್ಲಿ ಬರೆದು ಅಂಟಿಸಿದ ಪೋಸ್ಟರ್ ಬಗ್ಗೆಪೊಲೀಸರಿಗೆ ದೂರು ನೀಡಿದ್ದರು.
ಪೋಸ್ಟರ್‌ನಲ್ಲಿ ಈ ವರ್ಷದ ಕೊನೆಯೊಳಗೆ ಎಲ್ಲ ಮುಸ್ಲಿಮರು ಮನೆ ಬಿಟ್ಟು ಹೋಗಬೇಕೆಂದು ಬರೆಯಲಾಗಿತ್ತು. ಕೆಲವು ಪೋಸ್ಟರ್‌ಗಳನ್ನು ಹೊರತುಪಡಿಸಿದರೆ ಉಳಿದೆಲ್ಲವನ್ನು ಝೆರಾಕ್ಸ್ ಕಾಪಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪೋಸ್ಟರ್‌ನ ಆರಂಭದಲ್ಲಿ ಜೈಶ್ರೀರಾಂ ಎಂದು ಬರೆಯಲಾಗಿದೆ ಮತ್ತು ಕೊನೆಯಲ್ಲಿ ಗ್ರಾಮದ ಹಿಂದೂಗಳು ಎಂದು ಬರೆಯಲಾಗಿದೆ. ಪೊಲೀಸರು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.