ಮುಝಫರ್‌ನಗರ್ ಗಲಭೆ ಪ್ರಕರಣ : ‘ಅಮಾಯಕರ’ ವಿರುದ್ಧದ ಪ್ರಕರಣ ಹಿಂತೆಗೆತ: ಸಚಿವ ರಾಣಾ

ಮುಝಫರ್‌ನಗರ್,ಮಾ.25: 2013ರ ಮುಝಫರ್ ನಗರ ಹಾಗೂ ಅದರ ಆಸುಪಾಸಿನ ಜಿಲ್ಲೆಗಳಲ್ಲಿ ನಡೆದ ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿ ‘ಅಮಾಯಕ ವ್ಯಕ್ತಿಗಳ’ಮೇಲೆ ಹೊರಿಸಲಾದ ಪ್ರಕರಣಗಳನ್ನು ನೂತನ ಬಿಜೆಪಿ ಸರಕಾರವು ತನಿಖೆಯ ಬಳಿಕ ಹಿಂತೆಗೆದುಕೊಳ್ಳಲಿದೆಯೆಂದು, ಉತ್ತರಪ್ರದೇಶದ ಸಚಿವ ಸುರೇಶ್ ರಾಣಾ ಹೇಳಿದ್ದಾರೆ. .ಸಕ್ಕರೆ ಕಾರ್ಖಾನೆ ಹಾಗೂ ಕಬು ್ಬಕೃಷಿ ಖಾತೆಯ ಸಹಾಯಕ ಸಚಿವರಾದ ರಾಣಾ ಶುಕ್ರವಾರ ಶಾಮ್ಲಿ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ. ಸ್ವತಃ ರಾಣಾ ಮುಝಫರ್‌ನಗರ್ ಕೋಮುಗಲಭೆ ಪ್ರಕರಣದ ಆರೋಪಿಗಳಲ್ಲೊಬ್ಬರಾಗಿದ್ದುಕ, ಪ್ರಚೋದನಕಾರಿ ಭಾಷಣ ಮಾಡಿದದ ಆರೋಪದಲ್ಲಿ ಅವರ ಬಂಧನವಾಗಿತ್ತು. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ರಾಣಾ ವಿರುದ್ಧ ಮೊಕದ್ದಮೆ ದಾಖಲಾಗಿತ್ತು. 2013ರಲ್ಲಿ ಮುಝಫರ್ ನಗರ್ ಹಾಗೂ ಅಸುಪಾಸಿನ ಜಿಲ್ಲೆಗಳಲ್ಲಿ ನಡೆದ ಭೀಕರ ಕೋಮುಗಲಭೆಯಲ್ಲಿ ಕನಿಷ್ಠ 62 ಮಂದಿ ಮೃತಪಟ್ಟು, 50 ಸಾವಿರಕ್ಕೂ ಅಧಿಕ ಮಂದಿ ಸಂತ್ರಸ್ತರಾಗಿದ್ದರು.
ಖೈರಾನಾದಲ್ಲಿ ನಡೆದಿತ್ತೆನ್ನಲಾದ ಸಾಮೂಹಿಕ ವಲಸೆಯು, ರಾಜ್ಯದ ಇತರ ಪಟ್ಟಣಗಳಲ್ಲಿ ‘ಪುನರಾವರ್ತನೆ’ಗೊಳ್ಳುವುದನ್ನು ತಡೆಗಟ್ಟಲು ಆದಿತ್ಯನಾಥ್ ನೇತೃತ್ವದ ಸರಕಾರವು ರಾಜ್ಯದಲ್ಲಿ ಕಾನೂನು ಮತ್ತು ಶಿಸ್ತು ಪರಿಸ್ಥಿತಿಯನ್ನು ಬಲಪಡಿಸಲಿದೆಯೆಂದು ಅವರು ಹೇಳಿದರು.