ದೇವಧರ್ ಟ್ರೋಫಿ: ಭಾರತ ‘ಬಿ’ ತಂಡಕ್ಕೆ ರೋಚಕ ಜಯ
ಶಿಖರ್ ಧವನ್ ಆಕರ್ಷಕ ಶತಕ, ಕುಲಕರ್ಣಿಗೆ ಹ್ಯಾಟ್ರಿಕ್ ವಿಕೆಟ್

ವಿಶಾಖಪಟ್ಟಣ, ಮಾ.25: ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಆಕರ್ಷಕ ಶತಕದ(128, 122 ಎಸೆತ)ಸಹಾಯದಿಂದ ಶನಿವಾರ ಇಲ್ಲಿ ಆರಂಭವಾದ ದೇವಧರ್ ಟ್ರೋಫಿಯಲ್ಲಿ ಭಾರತ ‘ಬಿ’ ತಂಡ ಭಾರತ ‘ಎ’ ತಂಡದ ವಿರುದ್ಧ 23 ರನ್‌ಗಳ ಅಂತರದಿಂದ ರೋಚಕ ಜಯ ಸಾಧಿಸಿದೆ.
ಡಾ.ವೈ.ಎಸ್.ರಾಜಶೇಖರ್ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 328 ರನ್ ಗುರಿ ಪಡೆದಿದ್ದ ಭಾರತ ‘ಎ’ ತಂಡ ಕೊನೆಯ ತನಕ ಹೋರಾಟವನ್ನು ನೀಡಿತ್ತು. ಆದರೆ, ಹ್ಯಾಟ್ರಿಕ್ ವಿಕೆಟ್ ಪಡೆದ ವೇಗದ ಬೌಲರ್ ಧವಳ್ ಕುಲಕರ್ಣಿ ಭಾರತ ‘ಎ’ ತಂಡಕ್ಕೆ ಗೆಲುವು ನಿರಾಕರಿಸಿದರು.
ಟಾಸ್ ಜಯಿಸಿದ ಭಾರತ ‘ಎ’ ತಂಡದ ನಾಯಕ ಹರ್ಭಜನ್ ಸಿಂಗ್ ಮೊದಲು ಬೌಲಿಂಗ್ ಆಯ್ದುಕೊಂಡರು. ಮೊದಲ ವಿಕೆಟ್‌ಗೆ 93 ರನ್ ಸೇರಿಸಿದ ಭಾರತ ‘ಬಿ’ ತಂಡದ ನಾಯಕ ಪಾರ್ಥಿವ್ ಪಟೇಲ್(50, 48 ಎಸೆತ,9 ಬೌಂಡರಿ) ಹಾಗೂ ಧವನ್(128 ರನ್, 122 ಎಸೆತ, 13 ಬೌಂಡರಿ,3 ಸಿಕ್ಸರ್) ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟರು. 46 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪಟೇಲ್ ಎದುರಾಳಿ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು.
ಪಟೇಲ್ ಹಾಗೂ ಶ್ರೀವಾಸ್ತವ ಗೋಸ್ವಾಮಿ (1) ಔಟಾದ ಬಳಿಕ ಇಶಾಂತ್ ಜಗ್ಗಿ(53) ಅವರೊಂದಿಗೆ 3ನೆ ವಿಕೆಟ್‌ಗೆ 108 ರನ್ ಸೇರಿಸಿದ ಧವನ್ ತಂಡದ ಮೊತ್ತವನ್ನು ಹಿಗ್ಗಿಸಿದರು.
ದಿಲ್ಲಿ ಬ್ಯಾಟ್ಸ್‌ಮನ್ ಧವನ್ 66 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ಧವನ್‌ಗೆ ಸಮರ್ಥ ಸಾಥ್ ನೀಡಿದ ಜಗ್ಗಿ 45 ಎಸೆತಗಳಲ್ಲಿ 50 ರನ್ ಪೂರೈಸಿದರು. ಜಗ್ಗಿ ಔಟಾದ ಬಳಿಕ ಕೆಳ ಕ್ರಮಾಂಕದಲ್ಲಿ ಹರ್‌ಪ್ರೀತ್ ಸಿಂಗ್(29) ಹಾಗೂ ಅಕ್ಷರ್ ಪಟೇಲ್(22)ಉಪಯುಕ್ತ ಕಾಣಿಕೆ ನೀಡಿದರು.
114 ಎಸೆತಗಳಲ್ಲಿ ಶತಕವನ್ನು ತಲುಪಿದ ಧವನ್ 41ನೆ ಓವರ್‌ನಲ್ಲಿ ್ಲ128 ರನ್ ಗಳಿಸಿ ಸಿದ್ದಾರ್ಥ್ ಕೌಲ್‌ಗೆ(5-59)ವಿಕೆಟ್ ಒಪ್ಪಿಸಿದರು. ಭಾರತ ‘ಬಿ’ ತಂಡ ಡೆತ್ ಓವರ್‌ನಲ್ಲಿ ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಂಡರೂ 327 ರನ್ ಗಳಿಸಲು ಸಫಲವಾಯಿತು. ಕೌಲ್ 5 ವಿಕೆಟ್ ಗೊಂಚಲು ಪಡೆದರು. ಗೆಲ್ಲಲು ಕಠಿಣ ಸವಾಲು ಪಡೆದಿದ್ದ ಹರ್ಭಜನ್ ಸಿಂಗ್ ನಾಯಕತ್ವದ ಭಾರತ ‘ಎ’ ತಂಡ 12ನೆ ಓವರ್‌ನಲ್ಲಿ ಇಬ್ಬರು ಆರಂಭಿಕ ಆಟಗಾರರಾದ ಮಾಯಾಂಕ್ ಅಗರವಾಲ್(34) ಹಾಗೂ ಮನ್‌ದೀಪ್ ಸಿಂಗ್ (17) ವಿಕೆಟ್‌ಗಳನ್ನು ಕಳೆದುಕೊಂಡಿತು. ಆಗ ಅಂಬಟಿ ರಾಯುಡು(92 ರನ್, 92 ಎಸೆತ, 8 ಬೌಂಡರಿ, 2 ಸಿಕ್ಸರ್)ಹಾಗೂ ಮನೋಜ್ ತಿವಾರಿ 3ನೆ ವಿಕೆಟ್‌ಗೆ 79 ರನ್ ಜೊತೆಯಾಟ ನಡೆಸಿದರು. ತಿವಾರಿ(37) ವಿಕೆಟ್ ಪಡೆದ ಕುಲ್ವಂತ್ ಈ ಜೋಡಿಯನ್ನು ಬೇರ್ಪಡಿಸಿದರು. ರಿಷಬ್ ಪಂತ್(20) ದೊಡ್ಡ ಮೊತ್ತ ಗಳಿಸಲು ವಿಫಲರಾದರು.
ಆಗ ತಂಡದ ಗೆಲುವಿಗೆ 96 ಎಸೆತಗಳಲ್ಲಿ 143 ರನ್ ಅಗತ್ಯವಿತ್ತು. ಕ್ರುನಾಲ್ ಪಾಂಡೆ(31, 23 ಎಸೆತ, 3 ಬೌಂಡರಿ, 1 ಸಿಕ್ಸರ್) ಜೊತೆಗೂಡಿ ಹೋರಾಟ ಮುಂದುವರಿಸಿದ ರಾಯುಡು ಎದುರಾಳಿ ಬೌಲರ್‌ಗಳ ದಾಳಿಯನ್ನು ಹಿಮ್ಮೆಟ್ಟಿಸಿದರು. ಆದರೆ, ಕ್ರುನಾಲ್ ಹಾಗೂ ರಾಯುಡು 2 ಓವರ್ ಅಂತರದಲ್ಲಿ ಔಟಾದಾಗ ಭಾರತ ‘ಎ’ ಹಿನ್ನಡೆ ಅನುಭವಿಸಿತು. ಬಾಲಂಗೋಚಿ ಶಾರ್ದೂಲ್ ಠಾಕೂರ್(17, 8 ಎಸೆತ) ಜೊತೆಗೂಡಿ ಪ್ರತಿಹೋರಾಟ ನಡೆಸಿದ ದೀಪಕ್ ಹೂಡ(46ರನ್,27 ಎಸೆತ, 2 ಬೌಂಡರಿ, 3 ಸಿಕ್ಸರ್) ಭಾರತ ‘ಬಿ’ ಪಾಳಯದಲ್ಲಿ ನಡುಕ ಹುಟ್ಟಿಸಿದರು.
ಭಾರತ ‘ಎ’ ತಂಡಕ್ಕೆ 19 ಎಸೆತಗಳಲ್ಲಿ 28 ರನ್ ಅಗತ್ಯವಿದ್ದಾಗ ದಾಳಿಗಿಳಿದ ಕುಲಕರ್ಣಿ 47ನೆ ಓವರ್‌ನ ಕೊನೆಯ ಎಸೆತದಲ್ಲಿ ಶಾರ್ದೂಲ್ ವಿಕೆಟ್ ಪಡೆದರು. 49ನೆ ಓವರ್‌ನ ಮೊದಲೆರಡು ಎಸೆತಗಳಲ್ಲಿ ಹೂಡಾ ಹಾಗೂ ಕೌಲ್ ವಿಕೆಟ್‌ಗಳನ್ನು ಕಬಳಿಸಿ ಹ್ಯಾಟ್ರಿಕ್ ವಿಕೆಟ್ ಪಡೆದರು. ಮಾತ್ರವಲ್ಲ ಭಾರತ ‘ಬಿ’ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.
ಭಾರತ ‘ಬಿ’ ತಂಡ ರವಿವಾರ ಇದೇ ಮೈದಾನದಲ್ಲಿ ನಡೆಯಲಿರುವ ಎರಡನೆ ಪಂದ್ಯದಲ್ಲಿ ವಿಜಯ್ ಹಝಾರೆ ಚಾಂಪಿಯನ್ ತಮಿಳುನಾಡು ತಂಡವನ್ನು ಎದುರಿಸಲಿದೆ.
ಸಂಕ್ಷಿಪ್ತ ಸ್ಕೋರ್
ಭಾರತ ‘ಬಿ’: 50 ಓವರ್‌ಗಳಲ್ಲಿ 327/8
(ಶಿಖರ್ ಧವನ್ 128, ಇಶಾಂತ್ ಜಗ್ಗಿ 53, ಪಟೇಲ್ 50, ಸಿದ್ದಾರ್ಥ್ ಕೌಲ್(5-59), ಕ್ರನಾಲ್ ಪಾಂಡ್ಯ 2-41)
ಭಾರತ ‘ಎ’: 48.2 ಓವರ್‌ಗಳಲ್ಲಿ 304 ರನ್‌ಗೆ ಆಲೌಟ್
(ಅಂಬಟಿ ರಾಯುಡು 92, ಹೂಡ 46, ತಿವಾರಿ 37, ಕುಲಕರ್ಣಿ 3-64, ಕಾರ್ನೆವರ್ 3-60, ಅಕ್ಷರ್ ಪಟೇಲ್ 2-54, ಕುಲ್ವಂತ್ 2-54)







