ಭಾರತದ 33ನೆ ಟೆಸ್ಟ್ ನಾಯಕನಾದ ರಹಾನೆ

ಧರ್ಮಶಾಲಾ, ಮಾ.25: ಭುಜನೋವಿನಿಂದ ಬಳಲುತ್ತಿರುವ ವಿರಾಟ್ ಕೊಹ್ಲಿ ಆಸ್ಟ್ರೇಲಿಯ ವಿರುದ್ಧ ಶನಿವಾರ ಇಲ್ಲಿ ಆರಂಭವಾದ ನಾಲ್ಕನೆ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯದಿಂದ ಹೊರಗುಳಿದ ಹಿನ್ನೆಲೆಯಲ್ಲಿ ಅಜಿಂಕ್ಯ ರಹಾನೆ ಭಾರತದ 33ನೆ ಟೆಸ್ಟ್ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ.
ಎಡಗೈ ಸ್ಪಿನ್ನರ್ ಕುಲ್‌ದೀಪ್ ಯಾದವ್ ಚೊಚ್ಚಲ ಪಂದ್ಯ ಆಡುವ ಅವಕಾಶ ಗಿಟ್ಟಿಸಿಕೊಂಡರು. ಐದು ಬೌಲರ್‌ಗಳನ್ನು ದಾಳಿಗಿಳಿಸಲು ನಿರ್ಧರಿಸಿದ ಭಾರತ ಇಶಾಂತ್ ಶರ್ಮ ಬದಲಿಗೆ ಭುವನೇಶ್ವರ ಕುಮಾರ್‌ಗೆ ಅವಕಾಶ ನೀಡಿತು.
‘‘ತಾನು 100 ಶೇ. ಫಿಟ್ ಇದ್ದರೆ ಮಾತ್ರ ನಾಲ್ಕನೆ ಟೆಸ್ಟ್‌ನಲ್ಲಿ ಆಡುವೆ. ಫೀಲ್ಡಿಂಗ್‌ನ ವೇಳೆ ಭುಜನೋವು ಮರುಕಳಿಸುವ ಸಾಧ್ಯತೆಯಿದೆ’’ ಎಂದು ಕೊಹ್ಲಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದ್ದರು.
2011ರ ನವೆಂಬರ್‌ನಲ್ಲಿ ಮುಂಬೈನಲ್ಲಿ ವೆಸ್ಟ್‌ಇಂಡೀಸ್‌ನ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನಾಡಿದ್ದ ಕೊಹ್ಲಿ ಆ ಬಳಿಕ 54 ಪಂದ್ಯಗಳನ್ನು ಆಡಿದ್ದು, ಇದೇ ಮೊದಲ ಬಾರಿ ಗಾಯಗೊಂಡು ಪಂದ್ಯದಿಂದ ಹೊರಗುಳಿದಿದ್ದಾರೆ.
ಭಾರತದ ಕ್ರಿಕೆಟ್ ನರ್ಸರಿ ಎಂದೇ ಖ್ಯಾತಿ ಪಡೆದಿರುವ ಮುಂಬೈ ಮೂಲದ ಬ್ಯಾಟ್ಸ್‌ಮನ್ ರಹಾನೆ ದೇಶದ ಟೆಸ್ಟ್ ಕ್ರಿಕೆಟ್ ನಾಯಕನಾಗಿ ಆಯ್ಕೆಯಾಗುವ ಮೂಲಕ ಪಾಲಿ ಉಮ್ರಿಗರ್, ನಾರಿ ಕಾಂಟ್ರಾಕ್ಟರ್, ಜಿ.ಎಸ್. ರಾಮ್‌ಚಂದ್, ಅಜಿತ್ ವಾಡೇಕರ್, ಸುನೀಲ್ ಗವಾಸ್ಕರ್, ದಿಲಿಪ್ ವೆಂಗ್‌ಸರ್ಕಾರ್, ರವಿ ಶಾಸ್ತ್ರಿ ಹಾಗೂ ಸಚಿನ್ ತೆಂಡುಲ್ಕರ್ ಅವರಿದ್ದ ದಂತಕತೆಗಳ ಲೀಗ್‌ಗೆ ಸೇರ್ಪಡೆಯಾದರು.







