ವೇದಿಕೆ ಕುಸಿತ: ಲಾಲೂ ಪ್ರಸಾದ್‌ಗೆ ಗಾಯ
ಪಾಟ್ನಾ, ಮಾ.25: ಪಾಟ್ನಾದಲ್ಲಿ ನಡೆಯುತ್ತಿದ್ದ ಧಾರ್ಮಿಕ ಸಮಾರಂಭವೊಂದರ ವೇದಿಕೆ ಕುಸಿದು ಬಿದ್ದ ಕಾರಣ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಗಾಯಗೊಂಡ ಘಟನೆ ನಡೆದಿದೆ.
ಪಾಟ್ನಾದ ದಿಘಾ ಪ್ರದೇಶದಲ್ಲಿ ಧಾರ್ಮಿಕ ಸಂಘಟನೆಯೊಂದು ಹಮ್ಮಿಕೊಂಡಿದ್ದ ಯಜ್ಞದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲೂ ಮತ್ತವರ ಪುತ್ರ, ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ರಾಜ್ಯದ ಆರೋಗ್ಯ ಸಚಿವ ತೇಜ್‌ಪ್ರತಾಪ್ ಯಾದವ್ ಮತ್ತು ರಾಜ್ಯಸಭೆಯ ಸದಸ್ಯೆಯಾಗಿರುವ ಲಾಲೂ ಪುತ್ರಿ ಮಿಸಾ ಭಾರತಿ ಪಾಲ್ಗೊಂಡಿದ್ದರು.
ಈ ಸಂದರ್ಭ ಪಕ್ಷದ ಅಭಿಮಾನಿಗಳು ಲಾಲೂ ಅವರನ್ನು ಅಭಿನಂದಿಸಲು ಏಕಾಏಕಿ ವೇದಿಕೆಗೆ ನುಗ್ಗಿದಾಗ ಭಾರ ಹೆಚ್ಚಾಗಿ ವೇದಿಕೆ ಕುಸಿದಿದೆ. ಘಟನೆಯಲ್ಲಿ ಗಾಯಗೊಂಡ ಲಾಲೂರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಬೆನ್ನಿಗೆ ಏಟಾಗಿದೆ ಎಂದು ಲಾಲೂ ಸುದ್ದಿಗಾರರಿಗೆ ತಿಳಿಸಿದರು.
Next Story





