ಸಂಕುಚಿತ ಮನೋಭಾವದ ಶಕ್ತಿಗಳಿಂದ ವಿವಿ ಸ್ವಾತಂತ್ರಕ್ಕೆ ಸವಾಲು: ಹಾಮಿದ್ ಅನ್ಸಾರಿ
ಚಂಡಿಗಡ, ಮಾ.25: ಸಂಕುಚಿತ ಮನೋಭಾವನೆಗಳು ನಮ್ಮ ವಿವಿಗಳ ಸ್ವಾತಂತ್ರಕ್ಕೆ ಸವಾಲೆಸೆಯುತ್ತಿರುವ ಬಗ್ಗೆ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ಆತಂಕ ವ್ಯಕ್ತಪಡಿಸಿದ್ದು ವಿವಿಗಳ ‘ಮುಕ್ತ ಅವಕಾಶ’ವನ್ನು ರಕ್ಷಿಸುವ ಅಗತ್ಯವಿದೆ ಎಂದವರು ಆಗ್ರಹಿಸಿದ್ದಾರೆ.
ಚಂಡಿಗಡದಲ್ಲಿ ಶನಿವಾರ ನಡೆದ ಪಂಜಾಬ್ ವಿವಿಯ 66ನೆ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ‘‘ವಿಶ್ವವಿದ್ಯಾನಿಲಯಗಳು ಹೇಗಿರಬೇಕು ಅಥವಾ ಹೇಗಿರಬಾರದು ಎಂಬ ಬಗ್ಗೆ ತುಂಬಾ ಗೊಂದಲವಿದೆ ಎಂಬುದನ್ನು ನಮ್ಮ ದೇಶದಲ್ಲಿ ಇತ್ತೀಚೆಗೆ ನಡೆದ ಕೆಲವು ಘಟನೆಗಳು ತೋರಿಸಿಕೊಟ್ಟಿವೆ’’ ಎಂದು ಅವರು ಜೆಎನ್‌ಯು ಹಿಂಸಾಚಾರದ ಘಟನೆಗಳನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು.
ಪ್ರತಿಭಟಿಸುವ ಹಾಗೂ ವಿರೋಧಿಸುವ ಹಕ್ಕುಗಳು ನಮ್ಮ ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಹಾಸುಹೊಕ್ಕಾಗಿದೆ ಎಂದವರು ಹೇಳಿದರು. ಸಂಕುಚಿತವಾದ ವರ್ಗೀಯತೆ,ಸೈದ್ಧಾಂತಿಕ ಅಥವಾ ಧಾರ್ಮಿಕ ನೆಲೆಯಲ್ಲಿ ದೇಶವನ್ನು ವ್ಯಾಖ್ಯಾನಿಸುವುದನ್ನು ನಮ್ಮ ಸಂವಿಧಾನ ವಿರೋಧಿಸುತ್ತದೆ ಎಂದರು.
ಕಾನೂನುಬಾಹಿರ ವರ್ತನೆ ಅಥವಾ ಹಿಂಸಾಚಾರದ ಪ್ರಕರಣಗಳನ್ನು ಹೊರತುಪಡಿಸಿ, ಇನ್ಯಾವುದೇ ವಿಷಯಗಳಲ್ಲಿ ವಿದ್ಯಾರ್ಥಿಗಳು ಅಥವಾ ಬೋಧಕವರ್ಗವು ಅಭಿಪ್ರಾಯ ವ್ಯಕ್ತಪಡಿಸದಂತೆ ವಿವಿ ಒತ್ತಡ ಹೇರಕೂಡದು ಎಂದವರು ಹೇಳಿದರು. ಶೈಕ್ಷಣಿಕ ಸಮಗ್ರತೆ ಹಾಗೂ ಸ್ವಾತಂತ್ರವನ್ನು ಸಮರ್ಥಿಸಲು ವಿಶ್ವವಿದ್ಯಾನಿಲಯಗಳು ಅಗತ್ಯವಿರುವ ಎಲ್ಲಾ ಕಾನೂನುಕ್ರಮಗಳನ್ನು ಕೈಗೊಳ್ಳಬೇಕೆಂದು ಕರೆ ನೀಡಿದ ಅನ್ಸಾರಿ, ಬೌದ್ಧಿಕ ಸ್ವಾತಂತ್ರಕ್ಕೆ ಮನ್ನಣೆ ನೀಡುವಂತಹ ವಾತಾವರಣವನ್ನು ವಿವಿಗಳು ಸೃಷ್ಟಿಸಬೇಕೆಂದು ಅಭಿಪ್ರಾಯಿಸಿದರು.