ಜನಾರ್ಧನ ರೆಡ್ಡಿ ಆಸ್ತಿ ವಾಪಸ್ ಪ್ರಕರಣ: ತೀರ್ಪನ್ನು ತನಿಖೆಗೆ ಒಳಪಡಿಸಲು ಸುಪ್ರೀಂನಿಂದ ಕೊಲಿಜಿಯಂಗೆ ಪತ್ರ

ಬೆಂಗಳೂರು, ಮಾ. 25: ಮಾಜಿ ಸಚಿವ ಜನಾರ್ಧನರೆಡ್ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದ್ದ ಆಸ್ತಿಯನ್ನು ವಾಪಸ್ಸು ನೀಡುವಂತೆ ಆದೇಶಿಸಿರುವ ಹೈ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ತೀರ್ಪನ್ನು ತನಿಖೆಗೆ ಒಳಪಡಿಸಬೇಕು ಎಂದು ಲಂಚಮುಕ್ತ ಕರ್ನಾಟಕ ವೇದಿಕೆ ಆಗ್ರಹಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ, ಗಾಲಿ ಜನಾರ್ಧನ ರೆಡ್ಡಿಯು ಕರ್ನಾಟಕ ಮತ್ತು ಆಂಧ್ರಪ್ರದೇಶದ ಅರಣ್ಯ ಹಾಗೂ ಸಸ್ಯ ಸಂಪತ್ತನ್ನು ನಾಶ ಮಾಡಿ ಖನಿಜ ಸಂಪತ್ತನ್ನು ಲೂಟಿ ಮಾಡಿರುವುದು ನಿರ್ವಿವಾದದ ಸಂಗತಿಯಾಗಿದೆ. ಇದರ ವಿರುದ್ಧ 2010 ರಲ್ಲಿ ಜಾರಿ ನಿರ್ದೇಶನಾಲಯವು ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿ ಅವರ 900 ಕೋಟಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು ಎಂದರು.
ಆದರೆ, ಎಸ್.ಕೆ.ಮುಖರ್ಜಿ ರಾಜ್ಯದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ಫೆ.23 ರಂದು ಪ್ರಮಾಣ ವಚನ ಸ್ವೀಕರಿಸಿದ ಬಳಿಕ, ಜನಾರ್ಧನ ರೆಡ್ಡಿಯ ಓಬಳಾಪುರಂ ಮೈನಿಂಗ್ ಕಂಪನಿಯ ಪ್ರಕರಣವನ್ನು ಜಾರಿ ನಿರ್ದೇಶನಾಲಯದಿಂದ ಹೈ ಕೋರ್ಟ್‌ಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಅಲ್ಲದೆ, ದುರುದ್ದೇಶದಿಂದ ಹೈ ಕೋರ್ಟ್‌ನ ಆಡಳಿತವನ್ನು ದಾರಿ ತಪ್ಪಿಸಿ ಪ್ರಕರಣದಲ್ಲಿ ‘ಗಣಿ ಮತ್ತು ಖನಿಜ’ ಎಂದು ವರ್ಗೀಕರಿಸಿ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡ ನಂತರವೇ ಈ ಪ್ರಕರಣದಲ್ಲಿ ಜನಾರ್ಧನರೆಡ್ಡಿ ಪರವಾಗಿ ತಡೆಯಾಜ್ಞೆ ನೀಡಿದ್ದಾರೆ ಎಂದು ದೂರಿದರು.
ಈ ಬೆಳವಣಿಗೆ ಆಧಾರದ ಮೇಲೆ ಜನಾರ್ಧನರೆಡ್ಡಿ ಮತ್ತು ಅವರ ಪತ್ನಿಯ ಬ್ರಹ್ಮಿಣಿ ಸ್ಟೀಲ್ಸ್‌ಗೆ ಸಂಬಂಧಿಸಿದ ಮತ್ತೆರಡು ಅರ್ಜಿಗಳು ಸಲ್ಲಿಸಿದ್ದಾರೆ. ಈ ಎಲ್ಲ ಪ್ರಕರಣಗಳಿಗೆ ಸಂಬಂಧಿಸಿದಂತೆ 2017 ಮಾ.13 ರಂದು ಮುಖ್ಯ ನ್ಯಾಯಾಧೀಶ ಎಸ್.ಕೆ.ಮುಖರ್ಜಿಯಿದ್ದ ಪೀಠವು ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಪ್ರಕರಣಗಳನ್ನು ವಜಾ ಮಾಡಿ, ಮುಟ್ಟುಗೋಲು ಹಾಕಿಕೊಂಡಿದ್ದ ಎಲ್ಲ ಆಸ್ತಿಗಳನ್ನು ಜನಾರ್ಧನರೆಡ್ಡಿ ಮತ್ತು ಅವರ ಕಂಪನಿಗೆ ವಾಪಸ್ಸು ನೀಡುವಂತೆ ಆದೇಶ ನೀಡಲಾಗಿದೆ ಎಂದು ಹೇಳಿದರು.
ಈ ತೀರ್ಪಿಗೆ ಸಂಬಂಧಿಸಿದಂತೆ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದ್ದು, ಈ ಸಂಬಂಧ ತನಿಖೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ನ ಕೊಲಿಜಿಯಂಗೆ ಪತ್ರ ಬರೆಯಲಾಗಿದೆ. ಕೂಡಲೇ ಸುಪ್ರೀಂ ಕೋರ್ಟ್ ಈ ಕುರಿತು ತನಿಖೆ ಆರಂಭಿಸಬೇಕು ಹಾಗೂ ತನಿಖೆ ಪೂರ್ಣವಾಗುವವರೆಗೂ ನ್ಯಾ.ಮುಖರ್ಜಿಗೆ ನ್ಯಾಯಾಂಗ ಕೆಲಸದಲ್ಲಿ ನಿರತವಾಗದಂತೆ ಆದೇಶ ನೀಡಬೇಕು ಎಂದ ಅವರು, ಮುಂದಿನ ಎರಡು ವಾರಗಳಲ್ಲಿ ತನಿಖೆ ಪೂರ್ಣಗೊಳಿಸದಿದ್ದಲ್ಲಿ ವಕೀಲರು, ಹೋರಾಟಗಾರರನ್ನು ಒಳಗೊಂಡಂತೆ ಸಾರ್ವಜನಿಕ ಧರಣಿ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.







