ಅಕ್ರಮ ಅಡಿಕೆ ಸಾಗಾಟ ಪ್ರಕರಣ: 2.10 ಕೋ.ರೂ. ಮೌಲ್ಯದ ಅಡಿಕೆ ವಶ

ಮಂಗಳೂರು, ಮಾ. 25: ಅಕ್ರಮ ಅಡಿಕೆ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆಯ ಗುಪ್ತವಾರ್ತೆ ವಿಭಾಗ ನಡೆಸಿದ ಏಳು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಸುಮಾರು 2.10 ಕೋ.ರೂ. ಮೌಲ್ಯದ ಅಕ್ರಮ ಅಡಿಕೆ ಸಾಗಾಟವನ್ನು ಪತ್ತೆ ಹಚ್ಚಿ ದಂಡ ವಸೂಲಿ ಮಾಡಿದೆ.
ಪುತ್ತೂರು ನಿವಾಸಿ ಸಮೀರ್ ಮತ್ತು ಅಫ್ರೋಝ್ ಎಂಬವರಿಗೆ ಸೇರಿದ ಲಾರಿಯಲ್ಲಿ ಯಾವುದೇ ದಾಖಲೆ ಇಲ್ಲದೆ 20 ಲಕ್ಷ ರೂ. ಮೌಲ್ಯದ ಅಡಿಕೆಯನ್ನು ಸಾಗಿಸಲಾಗುತ್ತಿತ್ತು. ಇದನ್ನು ವಶಪಡಿಸಿಕೊಂಡು ರೂ.2 ಲಕ್ಷ ದಂಡ ವಿಧಿಸಲಾಗಿದೆ.
ಸಕಲೇಶಪುರದ ಅರೆಹಳ್ಳಿ ಬಳಿ 47 ಲಕ್ಷ ರೂ. ಮೌಲ್ಯದ ಅಡಿಕೆಯನ್ನು ವಶಪಡಿಸಿಕೊಂಡ ಅಧಿಕಾರಿಗಳು 4.78 ಲಕ್ಷ ರೂ. ದಂಡ ವಿಧಿಸಿದ್ದಾರೆ. ಮಂಗಳೂರಿನ ಲಿಬರ್ಟಿ ಸುಪಾರಿ ಟ್ರೇಡಿಂಗ್ ಮತ್ತು ಪುತ್ತೂರಿನ ಶಾ ಎಂಟರ್‌ಪ್ರೈಸಸ್‌ಗೆ ಸೇರಿದ ಈ ಅಡಿಕೆಯನ್ನು ಸ್ವರಾಜ್ ಎಕ್ಸ್‌ಪ್ರೆಸ್ ಕಾರ್ಗೊ ಹೆಸರಿನಲ್ಲಿ ದಾಖಲೆ ರಹಿತವಾಗಿ ಸಾಗಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಹರಿಯಾಣದ ಸಮರ್ಥ್ ಟ್ರೇಡರ್ಸ್ ಎಂ. ನಕಲಿ ಹೆಸರಿನಲ್ಲಿ ಸಾಗಿಸಲಾಗುತ್ತಿದ್ದ ರೂ.17 ಲಕ್ಷ ಮೌಲ್ಯದ ಅಡಿಕೆಯನ್ನು ಉಡುಪಿ ಬಳಿ ವಶಪಡಿಸಿಕೊಂಡು ರೂ.1.70 ಲಕ್ಷ ದಂಡ ವಿಧಿಸಲಾಗಿದೆ. ಇದು ಮಂಗಳೂರಿನ ಲಿಬರ್ಟಿ ಸುಾರಿ ಟ್ರೇಡಿಂಗ್ ಸಂಸ್ಥೆಗೆ ಸೇರಿದ್ದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇರಳದಿಂದ ಹರಿಯಾಣಕ್ಕೆ ಇಂಡೋ ಆರ್ಯನ್ ಟ್ರೇಡಿಂಗ್ ಸಂಸ್ಥೆ ಸಾಗಿಸುತ್ತಿದ್ದ 13 ಲಕ್ಷ ರೂ.ಮೌಲ್ಯದ ಅಕ್ರಮ ಅಡಿಕೆಗೆ 1.30 ಲಕ್ಷ ರೂ. ದಂಡ ವಿಧಿಸಲಾಗಿದೆ.
ಕೇರಳದಿಂದ ಹರಿಯಾಣಕ್ಕೆ ಸ್ವರಾಜ್ ಎಕ್ಸ್‌ಪ್ರೆಸ್ ಕಾರ್ಗೊ ಮೂಲಕ ಸಾಗಾಟವಾಗುತ್ತಿದ್ದ 30 ಲಕ್ಷ ರೂ. ಮೌಲ್ಯದ ಅಕ್ರ ಅಡಿಕೆಯನ್ನು ಕೋಟೆಕಾರ್ ಬಳಿಯಿಂದ ವಶಕ್ಕೆ 3 ಲಕ್ಷ ರೂ.ದಂಡ ಹಾಕಲಾಗಿದೆ.
ಉಡುಪಿ ಬಳಿ ನಡೆಸಿದ ಇನ್ನೊಂದು ಕಾರ್ಯಾಚರಣೆಯಲ್ಲಿ ಮಂಗಳೂರಿನ ಮಹಾಗಣಪತಿ ಟ್ರಾನ್ಸ್‌ಪೋರ್ಟ್ ಸಂಸ್ಥೆಗೆ ಸೇರಿದ 56 ಲಕ್ಷ ಮೌಲ್ಯದ ದಾಖಲೆ ರಹಿತ ಅಡಿಕೆ ಸಾಗಾಟಕ್ಕೆ 5.60 ಲಕ್ಷ ರೂ.ದಂಡ ಹಾಗೂ ಇದೇ ಟ್ರಾನ್ಸ್‌ಪೋರ್ಟ್ ಸಂಸ್ಥೆಗೆ ಸೇರಿದ 27 ಲಕ್ಷ ರೂ. ಮೌಲ್ಯದ ಅಕ್ರಮ ಅಡಿಕೆ ಸಾಗಾಟ ಪ್ರಕರಣಕ್ಕೆ ರೂ.2.67 ಲಕ್ಷ ದಂಡ ವಸೂಲಿ ಮಾಡಲಾಗಿದೆ.
ಮಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆಯ ಗುಪ್ತವಾರ್ತೆ ವಿಭಾಗದ ಜಂಟಿ ಆಯುಕ್ತ ನಾಣಿಯಪ್ಪ ನೇತೃತ್ವದಲ್ಲಿ ನಡೆದ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಡಿಸಿ ಕೃಷ್ಣ ಕುಮಾರ್, ಅಸಿಸ್ಟೆಂಟ್ ಕಮಿಷನರ್‌ಗಳಾದ ವಿಲ್ಫ್ರೆಡಿಸೋಜ, ರುದ್ರಪ್ಪ, ಸಿ.ಟಿ.ಒಗಳಾದ ಕೇಶವ ಮೂರ್ತಿ, ಭೀಮೇಗೌಡ, ಸೋಮಶೇಖರ್, ಅರುಣ್ ಕುಮಾರ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.







