ಮದ್ರಸ ಶಿಕ್ಷಕನ ಹತ್ಯೆ: ಆರೋಪಿಗಳಿಬ್ಬರು ಆರೆಸ್ಸೆಸ್ ಕಾರ್ಯಕರ್ತರು..?

ಕಾಸರಗೋಡು, ಮಾ.25: ಮದ್ರಸ ಶಿಕ್ಷಕ ರಿಯಾಝ್ ಕೊಲೆ ಪ್ರಕರಣದ ಇಬ್ಬರು ಆರೋಪಿಗಳು ಆರೆಸ್ಸೆಸ್ ಮುಖ್ಯ ಶಿಕ್ಷಕ್ ಆಗಿದ್ದಾರೆ ಎಂಬ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ.
ಪ್ರಕರಣದ ಪ್ರಥಮ ಆರೋಪಿ ಕೇಳುಗುಡ್ಡೆ ಅಯ್ಯಪ್ಪ ನಗರ ಭಜನಾ ಮಂದಿರ ಸಮೀಪದ ಅಜೇಶ್ ಯಾನೆ ಅಪ್ಪು(20) ಮತ್ತು ಕೇಳುಗುಡ್ಡೆ ಗಂಗೈ ರಸ್ತೆಯ ಅಖಿಲೇಶ್(25) ಆರೆಸ್ಸೆಸ್ ಮುಖ್ಯ ಶಿಕ್ಷಕ್ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿಗಳು ವಿಚಾರಣೆಯ ವೇಳೆ ತಾವು ಆರೆಸ್ಸೆಸ್ ಜೊತೆ ನಂಟು ಹೊಂದಿಲ್ಲ ಎಂದು ಪೊಲೀಸರ ಬಳಿ ಹೇಳಿ ಕೊಂಡಿದ್ದರೆನ್ನಲಾಗಿದೆ. ಆದರೆ ಮಿಸ್ಡ್‌ಕಾಲ್ ಮೂಲಕ ತಾನು ಬಿಜೆಪಿ ಸದಸ್ಯತ್ವ ಪಡೆದಿರುವುದಾಗಿ ಅಜೇಶ್ ತನಿಖೆ ವೇಳೆ ಹೇಳಿಕೊಂಡಿದ್ದ ಎಂದು ತಿಳಿದು ಬಂದಿದೆ. ಆದರೆ ತನಿಖಾ ತಂಡ ಈ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದೆ. ಇವರ ಮೊಬೈಲ್ಗಳಿಗೆ ಬಂದ ಸಂದೇಶಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಕಣ್ಣೂರಿನಲ್ಲಿ ಕೆಲ ತಿಂಗಳ ಹಿಂದೆ ನಡೆದ ಬಿಜೆಪಿ ಕಾರ್ಯಕರ್ತನ ಕೊಲೆಯ ಹಿನ್ನಲೆಯಲ್ಲಿ ಕಾಸರಗೋಡಿನಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಅಜೇಶ್ ಪಾಲ್ಗೊಂಡಿದ್ದನು. ಅಂಗಡಿಗಳಿಗೆ ಕಲ್ಲೆಸೆದ ತಂಡದಲ್ಲಿ ಅಜೇಶ್ ಕೂಡಾ ಇದ್ದನು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಅಂದು ಕರಂದಕ್ಕಾಡ್‌ನಲ್ಲಿ ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿ ಬೈಕನ್ನು ಹಾನಿಗೊಳಿಸಿದ್ದು ಅಜೇಶ್ ಎಂದು ಗುರುತಿಸಲಾಗಿದೆ. ಅಲ್ಲದೆ ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿ ಪ್ರಚಾರ ನಡೆಸಿದ್ದನು.
ಈ ನಡುವೆ ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್ ಸ್ಪಷ್ಟನೆ ನೀಡಿದ್ದಾರೆ.







