ಬಾವಿಗೆ ಬಿದ್ದ ವ್ಯಕ್ತಿ ಹೊರಬಂದಿದ್ದು ಹೀಗೆ !

ಮೂಡುಬಿದಿರೆ, ಮಾ.25: ಬಾವಿಯನ್ನು ಸ್ವಚ್ಛಗೊಳಿಸಲೆಂದು ಇಳಿದ ವ್ಯಕ್ತಿಯೋರ್ವರು ಕೆಲಸ ಮುಗಿಸಿ ಮೇಲಕ್ಕೆ ಬರುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ನಂತರ ಅವರನ್ನು ಮೂಡುಬಿದಿರೆ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ಶನಿವಾರ ನಡೆದಿದೆ.
ಕೊಡಂಗಲ್ಲುವಿನ ಶೈಲೇಶ್ (42) ಎಂಬವರೇ ಬಾವಿಯೊಳಗೆ ಬಿದ್ದು ಪ್ರಾಣಾಪಾಯಕ್ಕೊಳಗಾದ ವ್ಯಕ್ತಿ. ಇವರು ಕರಿಂಜೆ ಗ್ರಾಮದ ಬಿರಾವಿನಲ್ಲಿ ಬೇಬಿ ಶೆಟ್ಟಿ ಎಂಬವರ ಮನೆಯ ಬಾವಿಗಿಳಿದಿದ್ದ ಸಂದರ್ಭ ಈ ಘಟನೆ ನಡೆದಿದ್ದು, ಕೆಳಕ್ಕೆ ಬಿದ್ದ ಸಂದರ್ಭ ಶೈಲೇಶ್ ಅವರಿಗೆ ತರಚು ಗಾಯಗಳಾಗಿವೆ. ಕೂಡಲೇ ಮನೆಯವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದರು.
25 ಅಡಿ ಆಳದ ಬಾವಿಯಲ್ಲಿ 2 ಅಡಿ ನೀರಿತ್ತು. ಬಾವಿಯಿಂದ ಮೇಲೆ ಬರಲು ವಿಫಲ ಯತ್ನ ನಡೆಸಿದ್ದ ಶೈಲೇಶ್‌ರನ್ನು ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಮೇಲಕ್ಕೆತ್ತಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಅಗ್ನಿಶಾಮಕ ದಳದ ಠಾಣಾಧಿಕಾರಿ ಕಿಶೋರ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಿಬಂದಿಗಳಾದ ಸತೀಶ್, ಚಂದ್ರಶೇಖರ, ಕುಮಾರ್, ಕೃಷ್ಣ ನಾಯ್ಕಿ, ಸಂಜೀವ ಕುಲಕರ್ಣಿ ಹಾಗೂ ಹೋಂಗಾರ್ಡ್ ಲತೀಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.





