ಶಾಲೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ : ಒಂದೂವರೆ ವರ್ಷದ ಬಳಿಕ ಬೆಳಕಿಗೆ ಬಂದ ಭೀಭತ್ಸ ಘಟನೆ

ಬಿಕಾನೇರ್,ಮಾ.25: ಹದಿಮೂರರ ಹರೆಯದ ಶಾಲಾಬಾಲಕಿಯೊಬ್ಬಳನ್ನು ಆಕೆ ಕಲಿಯುತ್ತಿದ್ದ ಶಾಲೆಯ ಶಿಕ್ಷಕರು ಸೇರಿದಂತೆ ಎಂಟು ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿದ ಭೀಭತ್ಸ ಘಟನೆ ರಾಜಸ್ಥಾನದ ಬಿಕಾನೇರ್ ಜಿಲ್ಲೆಯಲ್ಲಿ ವರದಿಯಾಗಿದೆ.ಸುಮಾರು ಒಂದೂವರೆ ವರ್ಷದ ಹಿಂದೆ ನಡೆದ ಘಟನೆ, ಬಾಲಕಿಯು ತೀವ್ರವಾಗಿ ಅಸ್ವಸ್ಥತೆಗೊಳಗಾದ ಬಳಿಕ ಬಯಲಿಗೆ ಬಂದಿದೆ.
ಬಾಲಕಿ ಈಗ ರಕ್ತದ ಕ್ಯಾನ್ಸರ್ ಕಾಯಿಲೆಯಿಂದ ನರಳುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಹೆತ್ತವರು ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಗಳು ಅತ್ಯಾಚಾರದ ವಿಡಿಯೋ ಚಿತ್ರೀಕರಿಸಿದ್ದಲ್ಲದೆ, ಆಕೆಯನ್ನು ಮತ್ತು ಹೆತ್ತವರನ್ನು ಬ್ಲಾಕ್‌ಮೇಲ್ ಕೂಡಾ ಮಾಡಿದ್ದರು ಹಾಗೂ ತನ್ನನ್ನು ಕೊಲ್ಲುವ ಬೆದರಿಕೆಯೊಡ್ಡಿದರೆಂದು ಬಾಲಕಿ ತಿಳಿಸಿದ್ದಾರೆ.
7-8 ಮಂದಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆಂದು ಆರೋಪಿಸಿರುವ ಬಾಲಕಿ, ಅವರಲ್ಲಿ ಎಲ್ಲರ ಹೆಸರು ಗೊತ್ತಿಲ್ಲವೆಂದು ಹೇಳಿದ್ದಾರೆ. ಘಟನೆ ನಡೆ ಕೆಲವು ದಿನಗಳ ಬಳಿಕ ತಾನು ಪಾಲಕರಿಗೆ ವಿಷಯ ತಿಳಿಸಿದ್ದಾಗಿಯೂ ಆಕೆ ಹೇಳಿದ್ದಾಳೆ.
ಘಟನೆಗೆ ಸಂಬಂಧಿಸಿ ರಾಜಸ್ಥಾನ ಗೃಹ ಸಚಿವ ಗುಲಾಬ್ ಸಿಂಗ್ ಕಟಾರಿಯಾ ಶನಿವಾರ ಹೇಳಿಕೆ ನೀಡಿ, ಬಾಲಕಿಯ ತಂದೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿರುವುದಾಗಿ ಶಾಲಾಡಳಿತ ದೂರು ನೀಡಿತ್ತು. ತರುವಾಯ ಬಾಲಕಿಯ ತಂದೆ ಶಿಕ್ಷಕರ ವಿರುದ್ಧ ಅತ್ಯಾಚಾರದ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಪ್ರಕರಣದ ಪರಿಶೀಲನೆಗಾಗಿ ವೈದ್ಯಕೀಯ ಸಮಿತಿಯನ್ನು ರಚಿಸಲಾಗಿದೆ. ಅದು ವರದಿಯನ್ನು ಸಲ್ಲಿಸಿದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಅವರು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ದೂರು ದಾಖಲಿಸಲಾಗಿಯಾದರೂ ಈ ತನಕ ಯಾರನ್ನೂ ಬಂಧಿಸಿಲ್ಲವೆಂದು ನೋಖಾ ಠಾಣಾ ಪೊಲೀಸರು ತಿಳಿಸಿದ್ದಾರೆ.





