ಐಕಳ ಕಾಂತಾಬಾರೆ ಬೂದಾಬಾರೆ ಕಂಬಳ ರದ್ದು
ಮುಲ್ಕಿ, ಮಾ.25: ಶನಿವಾರ ನಡೆಯಬೇಕಿದ್ದ ಇತಿಹಾಸ ಪ್ರಸಿದ್ಧ ಐಕಳ ಕಾಂತಾಬಾರೆ ಬೂದಾಬಾರೆ ಸಾಂಪ್ರದಾಯಿಕ ಕಂಬಳಕ್ಕೆ ಮುಲ್ಕಿ ಪೊಲೀಸರು ಮತ್ತು ತಹಶೀಲ್ದಾರ್ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಕಂಬಳ ರದ್ದುಗೊಳಿಸಿದ ಘಟನೆ ಶನಿವಾರ ಮುಲ್ಕಿ ಸಮೀಪದ ಐಕಳ ಎಂಬಲ್ಲಿ ನಡೆದಿದೆ.
ಮುಲ್ಕಿ ಒಂಬತ್ತು ಮಾಗಣೆಗೆ ಸಂಬಂಸಿದ ಅವಳಿ ವೀರಪುರುಷರಾದ ಕಾಂತಾಬಾರೆ ಬುದಾಬಾರೆಯವರ ಹೆಸರಿನಲ್ಲಿ ನೂರಾರು ವರ್ಷಗಳಿಂದ ನಡೆಯುತ್ತಿದ್ದ ಜೋಡುಕರೆ ಕಂಬಳವು ಪ್ರತೀ ವರ್ಷ ಆಧುನೀಕರಣದ ಜೊತೆಗೆ ಸಂಪ್ರದಾಯದಂತೆ ನಡೆಯುತ್ತಿತ್ತು
. ಜನವರಿ ತಿಂಗಳಲ್ಲಿ ನಡೆಯಬೇಕಿದ್ದ ಐಕಳ ಕಂಬಳವನ್ನು ನ್ಯಾಯಾಲಯದ ತೀರ್ಪಿನ ಮೇರೆಗೆ ರದ್ದುಗೊಳಿಸಿದ್ದ ಸಂಘಟಕರು ಸಾಂಪ್ರದಾಯಿಕ ಕಂಬಳವನ್ನು ನಡೆಸದೆ ಕೋರ್ಟ್‌ನ ತೀರ್ಪಿಗಾಗಿ ಕಾಯುತ್ತಿದ್ದರು. ಆದರೆ ನ್ಯಾಯಲಯ ಇದುವರೆಗೂ ತೀಪು ಪ್ರಕಟಿಸದ ಹಿನ್ನೆಲೆಯಲ್ಲಿ ಶನಿವಾರ ಸಾಂಪ್ರದಾಯಿಕ ಕಂಬಳ ನಡೆಸುವುದಾಗಿ ಸಂಘಟಕರು ತೀರ್ಮಾನಿಸಿದ್ದರು.
ಆದರೆ, ಮುಲ್ಕಿ ಪೊಲೀಸರು ಮತ್ತು ವಿಶೇಷ ತಹಶೀಲ್ದಾರ್ ಇಂದು ಸ್ಥಳಕ್ಕೆ ಭೇಟಿ ನೀಡಿ ಸಾಂಪ್ರದಾಯಿಕ ಕಂಬಳ ಆಚರಣೆಗೂ ನಿರ್ಬಂಧ ಹೇರಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರು ಮತ್ತು ತಹಶೀಲ್ದಾರ್ ಅವರ ಸೂಚನೆಯಂತೆ ಕಂಬಳ ರದ್ದು ಗೊಳಿಸಿದ ಸಂಘಟಕರು, ಸಂಪ್ರದಾಯದಂತೆ ಕಂಬಳದ ಕರೆಯ ಬಳಿ ಒಂದು ಜೊತೆ ಕೋಣಕ್ಕೆ ಪೂಜೆ ಸಲ್ಲಿಸಿದರು.







