ಕನ್ನಡ ನಮ್ಮನ್ನು ನಾವು ತೆರೆದುಕೊಳ್ಳುವ ವಿಶಿಷ್ಟ ಮಾಧ್ಯಮ: ಏರ್ಯ ಲಕ್ಷ್ಮೀನಾರಾಯಣ ಆಳ್ವ
ಬಂಟ್ವಾಳ ತಾಲೂಕು 17ನೆ ಕನ್ನಡ ಸಾಹಿತ್ಯ ಸಮ್ಮೇಳನ

ಬಂಟ್ವಾಳ, ಮಾ. 25: ಕನ್ನಡವೆಂದರೆ ಕೇವಲ ಭಾಷೆಯಲ್ಲ. ಅಕ್ಷರಗಳ ಸಮೂಹವೂ ಅಲ್ಲ. ಅದು ನಮ್ಮನ್ನು ನಾವು ತೆರೆದುಕೊಳ್ಳುವ ವಿಶಿಷ್ಟ ಮಾಧ್ಯಮವಾಗಿದೆ ಎಂದು ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಹೇಳಿದರು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಸಿದ್ದಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜು ವಠಾರದ ಏರ್ಯ ಚಂದ್ರಬಾಗಿ ರೈ ಸಭಾಂಗಣದ ಐ.ಕೃಷ್ಣರಾಜ ಬಲ್ಲಾಳ್ ವೇದಿಕೆಯಲ್ಲಿ ಶನಿವಾರ ಜರಗಿದ ಬಂಟ್ವಾಳ ತಾಲೂಕು 17ನೆ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಪ್ರಸ್ತಾವಿಸಿದರು. ಬಂಟ್ವಾಳ ತಾಲೂಕು ಕಸಾಪ ಅಧ್ಯಕ್ಷ ಕೆ.ಮೋಹನ್ ರಾವ್ ಆಶಯ ನುಡಿಯಾಡಿದರು. ವಿಶ್ರಾಂತ ಪ್ರಾಧ್ಯಾಪಕ, ಲೇಖಕ ಪುಂಡಿಕಾ ಗಣಪಯ್ಯ ಭಟ್ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್ ಪುಸ್ತಕ ಪ್ರದರ್ಶನ ಉದ್ಘಾಟಿಸಿದರು. ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್ ಸ್ಮರಣ ಸಂಚಿಕೆ ‘ಪ್ರಸಿದ್ಧ’ವನ್ನು ಬಿಡುಗಡೆಗೊಳಿಸಿದರು. ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು. ವಿಧಾನ ಪರಿಷತ್ ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜ ಪ್ರೌಢಶಾಲಾ ಸೋಲಾರ್ ವ್ಯವಸ್ಥೆ ಅನಾವರಣಗೊಳಿಸಿದರು. ವಿಶ್ರಾಂತ ಕುಲಪತಿ, ಜಾನಪದ ವಿದ್ವಾಂಸ, ಡಾ. ಕೆ.ಚಿನ್ನಪ್ಪಗೌಡ ನಿಕಟ ಪೂರ್ವ ಸಮ್ಮೇಳನಾಧ್ಯಕ್ಷರ ಮಾತುಗಳನ್ನಾಡಿದರು. ಸ್ವಾಗತ ಸಮಿತಿಯ ಕೋಶಾಧಿಕಾರಿ ಡಾ.ಸುದೀಪ್ ಕುಮಾರ್ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ಬಂಟ್ವಾಳ ತಾಲೂಕು ಕಸಾಪ ಗೌರವ ಕೋಶಾಧಿಕಾರಿ ಡಾ.ಅಜಕ್ಕಳ ಗಿರೀಶ್ ಭಟ್ ಸಮ್ಮೇಳನಾಧ್ಯಕ್ಷರ ಕೃತಿಗಳ ಅವಲೋಕನ ಮಾಡಿದರು. ತಾಲೂಕು ಅಕ್ರಮ ಸಕ್ರಮ ಸಮಿತಿ ಯ
ಅಧ್ಯಕ್ಷ ಕೆ.ಮಾಯಿಲಪ್ಪ ಸಾಲಿಯಾನ್, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ., ಡಾ. ಪ್ರಭಾಚಂದ್ರ ಜೈನ್, ಎಪಿಎಂಸಿ ಸದಸ್ಯ ಪದ್ಮರಾಜ ಬಲ್ಲಾಳ್, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಜಿಲ್ಲಾ ಕಸಾಪ ಗೌ.ಕಾರ್ಯದರ್ಶಿ ಬಿ.ತಮ್ಮಯ್ಯ, ಬೋಗಾಡಿ ವಿಠಲ ಶೆಟ್ಟಿ, ಪ್ರೊ. ರಾಮಚಂದ್ರ, ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಅರ್ಕಕೀರ್ತಿ ಇಂದ್ರ, ಪ್ರ.ಕಾರ್ಯದರ್ಶಿ ರಮಾನಂದ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ., ಸ್ವಾಗತ ಸಮಿತಿಯ ಉಪಾಧ್ಯಕ್ಷ ಡಾ. ಪ್ರಭಾಚಂದ್ರ ಜೈನ್, ಸಂಚಾಲಕ ಪದ್ಮರಾಜ ಬಲ್ಲಾಳ್ ವೇದಿಕೆಯಲ್ಲಿದ್ದರು. ಸಮಿತಿ ಪದಾಧಿಕಾರಿಗಳಾದ ಸುರೇಶ್ ಶೆಟ್ಟಿ, ಗೋಪಿನಾಥ್ ರೈ, ಪ್ರಫುಲ್ಲ್ಲಾ ರೈ, ಲೋಕಯ್ಯ ಗಾಡಿಪಲ್ಕೆ, ಹರಿಪ್ರಸಾದ್ ಶೆಟ್ಟಿ, ಮಂದಾರತಿ ಎಸ್. ಶೆಟ್ಟಿ, ಸೀತಾರಾಮ ಶಾಂತಿ, ಸೀತಾರಾಮ ಶೆಟ್ಟಿ, ಸಂಜಯ್ ಬಿ.ಎಸ್., ಮಹೇಶ್ ಕುಮಾರ್, ಮಮತಾ ಪಿ.,ಎನ್.ಪದ್ಮನಾಭ ರೈ, ಪ್ರೊ. ಸತ್ಯನಾರಾಯಣ ಭಟ್, ರಮೇಶ್ ಭಟ್ ಮಾದೇರಿ, ದುರ್ಗಾದಾಸ್ ಶೆಟ್ಟಿ ಕರಿಂಕಿಜೆ ಮತ್ತಿತರರು ಭಾಗವಹಿಸಿದ್ದರು.
ಸ್ವಾಗತ ಸಮಿತಿಯ ಅಧ್ಯಕ್ಷ ಪ್ರಭಾಕರ ಪ್ರಭು ಸ್ವಾಗತಿಸಿದರು. ಬಂಟ್ವಾಳ ಕಸಾಪ ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ ವಂದಿಸಿದರು. ಹೋಬಳಿ ಸಂಚಾಲಕ ಗೋಪಾಲ ಅಂಚನ್ ಮತ್ತು ರವೀಂದ್ರ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲೆ-ಸಾಹಿತ್ಯಕ್ಕೆ ಸಿದ್ಧಕಟ್ಟೆಯ ಕೊಡುಗೆ, ಯಕ್ಷಗಾನ ಸಾಹಿತ್ಯ, ಸಾಹಿತ್ಯ ಪ್ರಸ್ತುತಿ, ಹಾವು-ನಾವು-ಪರಿಸರ ಕುರಿತು ವಿಚಾರ ಗೋಷ್ಠಿ ನಡೆಯಿತು.
ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗಲಿ: ಪುಂಡಿಕಾ
ಭೌಗೋಳಿಕವಾಗಿ, ರಾಜಕೀಯವಾಗಿ ಕರ್ನಾಟಕ ಏಕೀಕರಣವಾಗಿದೆಯೇ ಹೊರತು ಕನ್ನಡ ಮನಸ್ಸುಗಳನ್ನು ಬೆಸೆಯುವಲ್ಲಿ ನಾವಿನ್ನೂ ಸಫಲರಾಗಿಲ್ಲ. ಸರ್ವಕನ್ನಡಿಗರಲ್ಲೂ ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂಬ ಅಭಿಮಾನ ಮೂಡಿದಾಗ ಮಾತ್ರ ವಿಶಾಲ ಕರ್ನಾಟಕದ ಕನಸು ನನಸಾಗಲು ಸಾಧ್ಯ ಎಂದು ಬಂಟ್ವಾಳ ತಾಲೂಕು 17ನೆ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷ ಹಿರಿಯ ವಿದ್ವಾಂಸ ಪುಂಡಿಕಾ ಗಣಪಯ್ಯ ಭಟ್ ಹೇಳಿದರು.
ಸ್ವಾತಂತ್ರದ ನಂತರ ಕರ್ನಾಟಕ ರಾಜ್ಯದಲ್ಲಿ ಹಲವು ಕ್ಷೇತ್ರಗಳಲ್ಲಿ ಮಹಾನ್ ಕ್ರಾಂತಿಗಳಾದವು. ಆದರೆ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯೇ ಆಗಲಿಲ್ಲ. ರಾಜ್ಯದ ಮಟ್ಟಿಗೆ ಕನ್ನಡ ಶಾಲೆಗಳು ನಿರ್ಲಕ್ಷಿತವಾಗಿದೆ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಸರಕಾರಿ ಪ್ರಾಥಮಿಕ ಶಾಲೆಗಳಂತೂ ಅತಂತ್ರ ಸ್ಥಿತಿಯಲ್ಲಿವೆ. ಈ ಶಾಲೆಗಳು ವಿದ್ಯಾರ್ಥಿಗಳ ತೀವ್ರ ಕೊರತೆಯನ್ನೆದುರಿಸುತ್ತಿದ್ದು ಪ್ರತೀ ವರ್ಷ ನೂರಾರು ಸರಕಾರಿ ಶಾಲೆಗಳು ಮುಚ್ಚುವ ಪರಿಸ್ಥಿತಿಯನ್ನೆದುರಿಸಬೇಕಾಗಿದೆ ಎಂದರು. ಬಂಟ್ವಾಳ ತಾಲೂಕು ಸೇರಿದಂತೆ ಕರ್ನಾಟಕದಲ್ಲಿ ಇಂದು ಎಷ್ಟೋ ಕಾಲೇಜುಗಳಲ್ಲಿ ಕಲಾ ವಿಭಾಗಗಳು ವಿದ್ಯಾರ್ಥಿಗಳ ತೀವ್ರ ಕೊರತೆಯನನ್ನೆದುರಿಸುತ್ತಿದ್ದು, ಕೆಲವೆಡೆಗಳಲ್ಲಿ ಇವುಗಳು ಶಾಶ್ವತವಾಗಿ ಮುಚ್ಚುವ ಹಂತವನ್ನು ತಲಪಿವೆ. ನಾಡಿನ ಸಹಸ್ರಾರು ಉನ್ನತ ಶಿಕ್ಷಣಾಕಾಂಕ್ಷಿಗಳ ಆಸರೆಯಾಗಿದ್ದ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯವು ಕಳೆದ ಎರಡು ವರ್ಷಗಳಿಂದ ಕರ್ನಾಟಕ ಮುಚ್ಚಿದ ವಿಶ್ವವಿದ್ಯಾನಿಲಯವಾಗಿ ಪರಿವರ್ತಿತವಾಗಿದೆ. ಉನ್ನತ ಶಿಕ್ಷಣ ಕ್ಷೇತ್ರದ ಎಲ್ಲ ಗೊಂದಲಗಳಿಗೆ ಸೂಕ್ತ ಪರಿಹಾರವನ್ನು ಅತ್ಯಂತ ಜರೂರಾಗಿ ಕಂಡುಕೊಳ್ಳುವಲ್ಲಿ ವಿಫಲವಾದರೆ ಈಗಾಗಲೇ ಸೊರಗುತ್ತಿರುವ ಉನ್ನತ ಶಿಕ್ಷಣದ ಗುಣಮಟ್ಟ ಪಾತಾಳಕ್ಕೆ ಕುಸಿಯುವುದರಲ್ಲಿ ಸಂಶಯವಿಲ್ಲ ಎಂದು ಗಣಪಯ್ಯ ಭಟ್ ಆತಂಕ ವ್ಯಕ್ತಪಡಿಸಿದರು.
ಬಂಟ್ವಾಳ ತಾಲೂಕಿನಲ್ಲಿ ವಿದ್ಯಾರ್ಥಿ ಸಂಖ್ಯೆಯ ಕೊರತೆಯಿಂದಾಗಿ 18 ಶಾಲೆಗಳು ಮುಚ್ಚುವ ಭೀತಿಯನ್ನೆದುರಿಸುತ್ತಿವೆ. ಈ ಬಾರಿಯ ಬಜೆಟ್‌ನಲ್ಲಿ ಮುಂದಿನ ವರ್ಷದಿಂದ ಒಂದನೆ ತರಗತಿಯಿಂದಲೇ ಇಂಗ್ಲಿಷ್ ಭಾಷೆಯನ್ನು ಬೋಧಿಸಲು ಪ್ರಾರಂಭಿಸುವ ಬಗ್ಗೆ ಘೋಷಣೆ ಮಾಡಿರುವ ಮೂಲಕ ಕನ್ನಡ ಮಾಧ್ಯಮ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಇಂಗ್ಲಿಷ್ ಮಾಧ್ಯಮ ಅನಿವಾರ್ಯವಾಗಿದೆ ಎಂಬುದು ಸಾಬೀತಾಗಿದೆ ಎಂದು ಹೇಳಿದ ಅವರು, ಕರ್ನಾಟಕದಲ್ಲಿ ಪ್ರಸ್ತುತ ಒಟ್ಟು ಐವತ್ತು ಸಾವಿರಕ್ಕೂ ಹೆಚ್ಚು ಸರಕಾರಿ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿದ್ದು ಇವುಗಳಲ್ಲಿ ಒಟ್ಟು ಮೂವತ್ತೈದು ಸಾವಿರಕ್ಕೂ ಹೆಚ್ಚು ಶಿಕ್ಷಕ ಹುದ್ದೆಗಳು ಖಾಲಿ ಬಿದ್ದಿವೆ ಎಂದು ಖೇದ ವ್ಯಕ್ತಪಡಿಸಿದರು.







