ಕೇಂದ್ರ ಸರ್ಕಾರ ಇವಿಎಂ ಹ್ಯಾಕಥಾನ್ ಆಯೋಜಿಸಲಿ: ಪ್ರಿಯಾಂಕ್ ಸವಾಲು

ಬೆಂಗಳೂರು, ಮಾ.26: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತದಾನ ಯಂತ್ರ ಹ್ಯಾಕ್ ಮಾಡಲಾಗಿದೆ ಎಂದು ಕಾಂಗ್ರೆಸ್, ಸಮಾಜವಾದಿ ಹಾಗೂ ಬಹುಜನ ಸಮಾಜ ಪಕ್ಷಗಳು ಮಾಡಿರುವ ಆರೋಪ ಇದೀಗ ಹೊಸ ತಿರುವು ಪಡೆದಿದೆ. ಕೇಂದ್ರ ಸರ್ಕಾರ ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳ ಹ್ಯಾಕಥಾನ್ ಆಯೋಜಿಸಲಿ ಎಂದು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಅಣಕವಾಡಿದ್ದಾರೆ.
ಮೂರು ಪಕ್ಷಗಳ ಆರೋಪವನ್ನು ಅರ್ಥಹೀನ ಎಂದು ಬಣ್ಣಿಸಿರುವ ಕೇಂದ್ರ ಸಂಪರ್ಕ ಖಾತೆ ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಟ್ವಿಟ್ಟರ್‌ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. "ನೀವು ಗೆದ್ದರೆ ಇವಿಎಂ ಚೆನ್ನಾಗಿದೆ ಎಂದರ್ಥ. ನೀವು ಸೋತರೆ ಇವಿಎಂ ಮಾಹಿತಿ ತಿದ್ದಲಾಗಿದೆ ಎಂಬ ಅರ್ಥ. ಅದ್ಭುತ ತಾರ್ಕಿಕತೆ" ಎಂದು ವಿರೋಧ ಪಕ್ಷಗಳನ್ನು ರವಿಶಂಕರ್ ಅಣಕಿಸಿದ್ದರು.
ಇದಕ್ಕೆ ಪ್ರತಿಯಾಗಿ ಟ್ವೀಟಿಸಿರುವ ಪ್ರಿಯಾಂಕ್, "ಇದನ್ನು ಪರಾಮರ್ಶಿಸಿ ವಿವಾದಕ್ಕೆ ತೆರೆ ಎಳೆಯುವ ಉತ್ತಮ ಮಾರ್ಗವೆಂದರೆ, ಸ್ಟಾರ್ಟ್‌ಅಪ್ ಕರ್ನಾಟಕದಲ್ಲಿ ಇವಿಎಂಗಳನ್ನು ಹ್ಯಾಕ್ ಮಾಡಬಹುದು ಎಂಬ ಹ್ಯಾಕಥಾನ್ ಆಯೋಜಿಸುವುದು" ಎಂದು ಸವಾಲು ಹಾಕಿದ್ದಾರೆ.
ಇಂಥ ಹ್ಯಾಕಥಾನ್ ಆಯೋಜಿಸುವುದು ದೇಶದಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳ ಬಗ್ಗೆ ಜನರಿಗೆ ಸಂಪೂರ್ಣ ವಿಶ್ವಾಸ ಮೂಡಿಸುವ ಕ್ರಮವಾಗಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ..
"ವಿಜ್ಞಾನದ ಮೂಲತತ್ವವೆಂದರೆ ಪ್ರಶ್ನಿಸುವ ಮನೋಭಾವ ಹಾಗೂ ತಿಳಿದುಕೊಳ್ಳುವ ಕುತೂಹಲ. ಯಂತ್ರಗಳ ಮೇಲೆ ಸಂಪೂರ್ಣ ವಿಶ್ವಾಸ ಇರಿಸುವುದು ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಒಳ್ಳೆಯ ಲಕ್ಷಣವಲ್ಲ. ವೈಜ್ಞಾನಿಕ ಮನೋಭಾವ ಪ್ರಶ್ನಿಸುವುದನ್ನೂ ಒಳಗೊಳ್ಳುತ್ತದೆ" ಎಂದು ಹೇಳಿದ್ದಾರೆ.







