ತೊಕ್ಕೊಟ್ಟು: ರೈಲಿನಡಿಗೆ ತಲೆಯಿಟ್ಟು ವಿದ್ಯಾರ್ಥಿ ಆತ್ಮಹತ್ಯೆ

ಉಳ್ಳಾಲ, ಮಾ. 26: ತನ್ನ ಕಲಿಕೆಗೆ ತಕ್ಕ ಉದ್ಯೋಗ ಸಿಗಲಿಲ್ಲ ಎಂದು ನೊಂದ ಯುವಕನೋರ್ವ ರೈಲಿನಡಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೊಲ್ಯ ಬಾಯ್‌ಲಾಂಡ್ ಬಳಿ ಶನಿವಾರ ನಡೆದಿದ್ದು, ರವಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಆತ್ಮಹತ್ಯೆ ಮಾಡಿಕೊಂಡಾತನನ್ನು ಉಪ್ಪಳ ಬೇಕೂರು ನಿವಾಸಿ ನಿಶಾನ್ ಕುಮಾರ್(26) ಎಂದು ಗುರುತಿಸಲಾಗಿದೆ.
ನಿಶಾನ್ ಪದವಿಪೂರ್ವ ಶಿಕ್ಷಣದಲ್ಲಿ ಉತ್ತಮ ಅಂಕ ಪಡೆದ ಬಳಿಕ ಕೆಂಜಾರು ಶ್ರೀದೇವಿ ತಾಂತ್ರಿಕ ಕಾಲೇಜಿನಲ್ಲಿ ಬಿಸಿಎ ಕೋರ್ಸ್ ಮಾಡಿದ್ದರು ಎನ್ನಲಾಗಿದೆ. 2016ಕ್ಕೆ ಈತ ಕೋರ್ಸ್ ಮುಗಿಸಿ ಮಂಗಳೂರಿನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಎಂದು ತಿಳಿದು ಬಂದಿದೆ.
ಮೋಪರ್ ಮೋಟಾರ್ ಕಂಪೆನಿಯಲ್ಲಿ ಕೆಲಸಮಾಡುತ್ತಿದ್ದ ಈತ ವಿದ್ಯೆಗೆ ತಕ್ಕ ಉತ್ತಮ ಉದ್ಯೋಗ ದೊರೆತಿಲ್ಲ ಎಂದು ತೀವ್ರವಾಗಿ ನೊಂದುಕೊಂಡಿದ್ದ. ಈ ವಿಚಾರವನ್ನು ತನ್ನ ತಂದೆ ತಾಯಿಯವರಲ್ಲಿ, ಅಣ್ಣನವರಲ್ಲಿ ಹೇಳಿದ್ದ. ಶನಿವಾರ ಇದೇ ವಿಚಾರವನ್ನು ಮನೆಯವರಲ್ಲಿ ನಿಶಾನ್ ತಿಳಿಸಿದ್ದು, ಈ ವೇಳೆ ಮನೆ ಮಂದಿ ನಿಶಾನ್‌ರನ್ನು ಸಮಾಧಾನಪಡಿಸಿ ಕೆಲಸಕ್ಕೆ ಕಳುಹಿಸಿದ್ದರೆನ್ನಲಾಗಿದೆ.
ಶನಿವಾರ ಕೆಲಸಕ್ಕೆಂದು ಹೋದವರು ಮತ್ತೆ ಮನೆಗೆ ಬಾರದೇ ನಾಪತ್ತೆಯಾಗಿದ್ದ. ಇದರಿಂದ ನೊಂದ ಕುಟುಂಬ ಕಾವೂರು ಠಾಣೆಗೆ ದೂರುಕೊಡಲು ಹೋದ ಸಂದರ್ಭ ಕೊಲ್ಯದಲ್ಲಿ ಮೃತದೇಹ ಸಿಕ್ಕಿದ ಮಾಹಿತಿ ಲಭಿಸಿತ್ತು. ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿದ ರೈಲ್ವೆ ಪೊಲೀಸರು ಸಾವನಪ್ಪಿದ ವ್ಯಕ್ತಿಯ ಕಿಸೆಯನ್ನು ಪರಿಶೀಲಿಸಿದ್ದು, ಕಿಸೆಯಲ್ಲಿ ದೆತ್ ನೋಟ್, ಗುರುತಿನ ಚೀಟಿ ದೊರೆತಿದೆ. ಡೆತ್ ನೋಟ್‌ನಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆಯಲಾಗಿತ್ತು.
ಗುರುತಿನ ಚೀಟಿಯ ಆಧಾರದಲ್ಲಿ ಬೇಕೂರು ನಿವಾಸಿ ನಿಶಾನ್‌ನ ಮೃತದೇಹ ಎಂದು ಗುರುತಿಸಲಾಗಿದೆ. ತಕ್ಷಣ ಪೋಷಕರಿಗೆ ಮಾಹಿತಿ ರವಾನಿಸಲಾಗಿದೆ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.







