ಲ್ಯಾಂಡ್ ಟ್ರೇಡ್ಸ್ ‘ಸಂಸ್ಕೃತಿ’ ವಸತಿ ಸಮುಚ್ಚಯ ಉದ್ಘಾಟನೆ

ಮಂಗಳೂರು, ಮಾ.26: ನಗರದ ಪ್ರತಿಷ್ಠಿತ ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಸಂಸ್ಥೆಯ ವತಿಯಿಂದ ಶ್ರೀಮಂಗಳಾ ದೇವಿ ದೇವಸ್ಥಾನದ ಬಳಿ ನಿರ್ಮಾಣಗೊಂಡ ಸಂಸ್ಕೃತಿ ವಸತಿ ಸಮುಯ ರವಿವಾರ ಉದ್ಘಾಟನೆಗೊಂಡಿತು.
ನೂತನ ವಸತಿ ಸಮುಚ್ಚಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಜೆ.ಆರ್.ಲೋಬೊ, ನಗರದ ಅಭಿವೃದ್ಧಿಗೆ ಗುಣಮಟ್ಟದ ಕಟ್ಟಡಗಳನ್ನು ನಿರ್ಮಿಸಿ ಗ್ರಾಹಕರಿಂದ ಉತ್ತಮ ಮನ್ನಣೆ ಪಡೆಯಲು ಸಾಧ್ಯ. ಮುಂದಿನ ಎರಡು ವರ್ಷಗಳೊಳಗೆ ಸ್ಮಾರ್ಟ್ ಸಿಟಿ, ಅಮೃತ ನಗರ ಯೋಜನೆ, ಎಡಿಬಿ ಯೋಜನೆಯಡಿ ಸುಮಾರು ಎರಡು ಸಾವಿರ ಕೋಟಿ ರೂ. ಅನ್ನು ನಗರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವ್ಯಯಿಸಲಾಗುವುದು. ಇದೇ ಸಂದರ್ಭ ಇಲ್ಲಿನ ಉದ್ಯಮಿಗಳು ನಿರ್ಮಾಣ, ಕೈಗಾರಿಕೆ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿದರೆ ಸಾಮೂಹಿಕ ಪ್ರಯತ್ನದಿಂದ ನಗರದ ಅಭಿವೃದ್ಧಿ ಸಾಧ್ಯ. ಅದರಿಂದ ಸಾಕಷ್ಟು ಉದ್ಯೋಗಾವಕಾಶ ಕೂಡಾ ಸೃಷ್ಟಿಯಾದೀಕು ಎಂದರು.
ಲ್ಯಾಂಡ್ ಟ್ರೇಡ್ಸ್ ಸಂಸ್ಥೆ ಗುಣಮಟ್ಟದ ಕಟ್ಟಡಗಳ ನಿರ್ಮಾಣದ ಮೂಲಕ ಕ್ರಿಸೆಲ್ ಮಾನ್ಯತೆಯನ್ನು ಪಡೆದಿರುವ ನಗರದ ಕೇವಲ ಎರಡು ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿದೆ ಎಂಬುದು ಹೆಮ್ಮೆಯ ವಿಚಾರ ಎಂದವರು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಮನಪಾ ಸದಸ್ಯ ಪ್ರೇಮಾನಂದ ಶೆಟ್ಟಿ ಮಾತನಾಡಿ, ನಗರದಲ್ಲಿ ಉತ್ತಮ ಮೂಲಭೂತ ಸೌಕರ್ಯಗಳೊಂದಿಗೆ ಅತ್ಯುತ್ತಮ ಗುಣಮಟ್ಟದ ವಸತಿ ಸೌಕರ್ಯವನ್ನು ಒದಗಿಸುತ್ತಿರುವ ಲ್ಯಾಂಡ್ ಟ್ರೇಡ್ಸ್ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಕ್ರೆಡೈ ಅಧ್ಯಕ್ಷ ಡಿ.ಬಿ.ಮೆಹ್ತಾ ಮಾತನಾಡಿ, ಗ್ರಾಹಕರಿಗೆ ಕ್ಲಪ್ತ ಸಮಯದಲ್ಲಿ ಉತ್ತಮ ಗುಣಮಟ್ಟದ ಕಟ್ಟಡಗಳನ್ನು ನಿರ್ಮಿಸಿ ಕೊಡುವುದು ಪ್ರಥಮ ಆದ್ಯತೆಯಾಗಬೇಕು ಎಂದರು. ಮಂಗಳೂರು ನಗರವು ಪ್ರಪಂಚದ ವಿವಿಧ ರಾಷ್ಟ್ರಗಳ 200 ನಗರಗಳ ಪೈಕಿ ಗುಣಮಟ್ಟದ ಜೀವನ ಮಟ್ಟವನ್ನು ಹೊಂದಿರುವ ನಗರಗಳ ಪೈಕಿ 48ನೆ ಸ್ಥಾನ ಗಳಿಸಿದೆ ಎಂದರು.
ಸ್ವಾಗತಿಸಿ ಮಾತನಾಡಿದ ಲ್ಯಾಂಡ್ ಟ್ರೇಡ್ಸ್‌ನ ಪ್ರವರ್ತಕ ಕೆ.ಶ್ರೀನಾಥ್ ಹೆಬ್ಬಾರ್, ಒಟ್ಟು 20 ಫ್ಲಾಟ್‌ಗಳನ್ನು ಹೊಂದಿರುವ ಸಂಸ್ಕೃತಿ ವಸತಿ ಸಮುಚ್ಚಯವು ತಳ ಅಂತಸ್ತಿನಲ್ಲಿ ಏಳು ವಾಣಿಜ್ಯ ಮಳಿಗೆಗಳನ್ನು ಹೊಂದಿದೆ. ವಿಸ್ತಾರವಾದ ಪಾರ್ಕಿಂಗ್ ಸ್ಥಳ ಹಾಗೂ ಆಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ಮಂಗಳೂರಿನ ಕೇಂದ್ರ ಸ್ಥಾನದಲ್ಲಿ ಶಿಕ್ಷಣ, ಆರೋಗ್ಯ, ವಾಣಿಜ್ಯ-ವ್ಯಾಪಾರ ಹಾಗೂ ವಿವಿಧ ಧರ್ಮಗಳ ಧಾರ್ಮಿಕ ಕೇಂದ್ರಗಳನ್ನು ಹೊಂದಿರುವ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ ಎಂದರು.
ಗ್ರಾಹಕರಿಗೆ ಸೂಕ್ತ ಸೌಲಭ್ಯಗಳೊಂದಿಗೆ ಗುಣಮಟ್ಟದ ವಸತಿ ಸಮುಚ್ಚಗಳ ನಿರ್ಮಾಣ ಸಂಸ್ಥೆಯ ಪ್ರಥಮ ಆದ್ಯತೆಯಾಗಿದೆ ಎಂದರು.
ಮಂಗಳಾದೇವಿ ದೇವಸ್ಥಾನದ ಆಡಳಿತ ಟ್ರಸ್ಟಿ ಪಿ.ರಮಾನಾಥ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ಮನೋಹರ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಜಿ.ಎಸ್ .ಎಸ್. ಕುಮಾರ್ ವಂದಿಸಿದರು.







