ಜಿಶಾ ಕೊಲೆ ಪ್ರಕರಣದ ತನಿಖೆಯಲ್ಲಿ ಗಂಭೀರ ಲೋಪ: ಗುಪ್ತಚರ ಇಲಾಖೆ

ತಿರುವನಂತಪುರಂ, ಮಾ. 26: ಜಿಶಾ ಕೊಲೆ ಪ್ರಕರಣದ ತನಿಖೆಯಲ್ಲಿ ಗಂಭೀರ ಲೋಪವಾಗಿದೆ ಎಂದು ಗುಪ್ತಚರ ಇಲಾಖೆ ವರದಿ ತಿಳಿಸಿದೆ. ತನಿಖೆಯಲ್ಲಿ ಆರಂಭದಿಂದಲೇ ಎಡವಟ್ಟು ಸಂಭವಿಸಿದೆ ಎಂದು ವಿಜಿಲೆನ್ಸ್ ನಿರ್ದೇಶಕ ಜೇಕಬ್ ಥಾಮಸ್ ಗೃಹ ಕಾರ್ಯದರ್ಶಿಗೆ ನೀಡಿದ ವರದಿಯಲ್ಲಿ ವಿವರಿಸಲಾಗಿದೆ.
ಈಗ ಇರುವ ಸಾಕ್ಷ್ಯಗಳು ನ್ಯಾಯಾಲಯದಲ್ಲಿ ಬಿದ್ದುಹೋಗಲಿವೆ. ವೈಜ್ಞಾನಿಕ ಸಾಕ್ಷ್ಯಗಳನ್ನು ಸಂಗ್ರಹಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಜಿಶಾ ಕೊಲೆಯಾದ ಕೋಣೆಯಲ್ಲಿ ಅಮೀರುಲ್ ಇಸ್ಲಾಮ್‌ನದ್ದಲ್ಲದ ಇನ್ನೊಬ್ಬರ ಬೆರಳಚ್ಚು ಕೂಡಾ ಸಿಕ್ಕಿದೆ. ಇದರ ಕುರಿತು ಪೊಲೀಸರು ತನಿಖೆ ಮಾಡಿಲ್ಲ. ಆದ್ದರಿಂದ ತನಿಖೆಯಲ್ಲಿ ಇದು ದೊಡ್ಡ ಲೋಪವಾಗಿದೆ ಎಂದು ಗುಪ್ತಚರ ನಿರ್ದೇಶಕರು ಸಲ್ಲಿಸಿದ ವರದಿಯಲ್ಲಿ ಹೇಳಿದ್ದಾರೆ. ವರದಿಯನ್ನು ಗೃಹಕಾರ್ಯದರ್ಶಿ ಡಿಜಿಪಿಗೆ ಹಸ್ತಾಂತರಿಸಿದ್ದಾರೆ.
ಆದರೆ, ಗುಪ್ತಚರ ನಿರ್ದೇಶಕರ ವರದಿಯನ್ನು ಡಿಜಿಪಿ ತಳ್ಳಿಹಾಕಿದ್ದು, ಕ್ರಿಮಿನಲ್ ಕೇಸು ತನಿಖೆಯಲ್ಲಿ ಗುಪ್ತಚರ ಇಲಾಖೆಯು ಅನಧಿಕೃತವಾಗಿ ಮಧ್ಯಪ್ರವೇಶಿಸಿದೆ ಎಂದು ಡಿಜಿಪಿ ಬಿ. ಸಂಧ್ಯಾ ಆರೋಪಿಸಿದ್ದಾರೆ. ತನಿಖೆಯ ದಾರಿ ತಪ್ಪಿಸುವ ಮತ್ತು ತನಿಖಾ ತಂಡದ ಸ್ಥೈರ್ಯ ಕೆಡಿಸುವ ಪ್ರಯತ್ನವಿದು ಎಂದು ಡಿಜಿಪಿ ಆರೋಪಿಸಿದ್ದಾರೆ.





