ವಿಶ್ವದ ಅತಿವೇಗದ ಪೊಲೀಸ್ ಕಾರು ಎಲ್ಲಿದೆ ಗೊತ್ತೇ?

ದುಬೈ, ಮಾ.26: ಶರವೇಗದ ಬುಗಾಟ್ಟಿ ವೇರೋನ್ ದುಬೈ ಬೀದಿಗಳಲ್ಲಿ ಮಿಂಚಿನಂತೆ ಮುನ್ನುಗ್ಗುತ್ತಿದ್ದರೆ ಅದು ಯಾವುದೋ ವಾಹನವನ್ನು ಚೇಸ್ ಮಾಡುತ್ತಿದೆ ಎನ್ನುವುದು ನಿಮ್ಮ ಕಲ್ಪನೆಗೂ ಬಾರದು. ಆದರೆ ದುಬೈ ಪೊಲೀಸರ ವೇಗದ ಕಾರುಗಳ ಸರಣಿಗೆ ಹೊಸದಾಗಿ ಸೇರ್ಪಡೆಯಾಗಿರುವ ಈ ಕಾರು ಗಂಟೆಗೆ 235 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲದು. ಈ ಮೂಲಕ ವಿಶ್ವದ ಅತಿವೇಗದ ಪೊಲೀಸ್ ಕಾರು ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.
ದುಬೈ ಪೊಲೀಸ್ ಪಡೆ ಇಂಥ 14 ಸೂಪರ್ ಕಾರುಗಳನ್ನು ಹೊಂದಿದೆ. ಆಸ್ಟನ್ ಮಾರ್ಟಿನ್ ವನ್-77, ಲಾಂಬೋರ್‌ಗಿನ್ನಿ ಅವೆಂಟಡೋರ್ ಹಾಗೂ ಫೆರಾರಿ ಎಫ್‌ಎಫ್ ಇದರಲ್ಲಿ ಸೇರಿದೆ. ಸಾರ್ವಜನಿಕರಲ್ಲಿ ಪೊಲೀಸ್ ಪಡೆಯ ಇಮೇಜ್ ಹೆಚ್ಚಿಸುವ ಪ್ರಯತ್ನವಾಗಿ 2013ರಿಂದ ವೇಗದ ಕಾರುಗಳನ್ನು ಸೇರ್ಪಡೆ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ.
ಈ ವಾಹನಗಳನ್ನು ಪ್ರವಾಸಿ ತಾಣಗಳ ಸುತ್ತಮುತ್ತ ಚಲಾಯಿಸಲಾಗುತ್ತಿದ್ದು, ಮಾರುಕಟ್ಟೆ ಸಾಧನವಾಗಿ ಇದು ಬಳಕೆಯಾಗುತ್ತಿದೆ. ಪೊಲೀಸ್ ಇಲಾಖೆ ಇದೀಗ ತನ್ನ ಪರಿಸರ ಸ್ನೇಹಿ ಇಮೇಜ್ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದ್ದು, ಇದಕ್ಕಾಗಿ ಎಲೆಕ್ಟ್ರಿಕ್ ಹಾಗೂ ಹೈಬ್ರೀಡ್ ಕಾರುಗಳನ್ನು ಸರ್ಕಾರಿ ಸೇವೆಗೆ 2030ರೊಳಗೆ ಬಳಸಿಕೊಳ್ಳಲು ನಿರ್ಧರಿಸಿದೆ.
ವಿಶ್ವದ ಎರಡನೇ ಅತಿವೇಗದ ಪೊಲೀಸ್ ಕಾರು ಲ್ಯಾಂಬರ್‌ಗಿನ್ನಿ ಗಲ್ಲಾರ್ಡೊ ಎಲ್‌ಪಿ560-4 ಆಗಿದ್ದು, ಇಟಲಿ ಪೊಲೀಸರ ಬಳಿ ಇದೆ.













