ಪ್ರಶಾಂತ್ ಭೂಷಣ್ ಕಾರ್ಯಕ್ರಮಕ್ಕೆ ಎಬಿವಿಪಿ ಕಾರ್ಯಕರ್ತರ ಅಡ್ಡಿ

ಅಲಿಗಢ, ಮಾ.26: ಇಲ್ಲಿಯ ಕಾಲೇಜೊಂದರಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಕೀಲ ಪ್ರಶಾಂತ್ ಭೂಷಣ್ ಉಪಸ್ಥಿತಿಯನ್ನು ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ (ಎಬಿವಿಪಿ) ಕಾರ್ಯಕರ್ತರು ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದ ಘಟನೆ ನಡೆದಿದೆ.
ಬಳಿಕ ಪೊಲೀಸ್ ಭದ್ರತೆಯೊಂದಿಗೆ ಪ್ರಶಾಂತ್ ಭೂಷಣ್ ಅವರನ್ನು ಕಾಲೇಜು ಆವರಣದಿಂದ ಕರೆದೊಯ್ಯಲಾಯಿತು. ಧರಮ್ ಸಮಾಜ್ ಪದವಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಶಾಂತ್ ಭೂಷಣ್ ಉಪನ್ಯಾಸ ನೀಡಬೇಕಿತ್ತು. ಆದರೆ ಭೂಷಣ್, ಕೇಂದ್ರ ಸರಕಾರದ ವಿರುದ್ಧ ಭ್ರಷ್ಟಾಚಾರದ ಸುಳ್ಳು ಆರೋಪ ಹೊರಿಸಿದ್ದಾರೆಂದು ದೂರಿ ಎಬಿವಿಪಿ ಕಾರ್ಯಕರ್ತರು ಕಾಲೇಜಿನ ಆವರಣಕ್ಕೆ ನುಗ್ಗಿ ಘೋಷಣೆ ಕೂಗತೊಡಗಿದರು.
ಅಲ್ಲದೆ ಕಾರ್ಯಕ್ರಮದಲ್ಲಿ ಎಎಂಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಫೈಝಲ್ ಹಸನ್ ಉಪಸ್ಥಿತಿಯನ್ನೂ ಎಬಿವಿಪಿ ಕಾರ್ಯಕರ್ತರು ವಿರೋಧಿಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವುದನ್ನು ಅರಿತುಕೊಂಡ ಫೈಝಲ್ ಅಲ್ಲಿಂದ ತೆರಳಿದರು. ಪ್ರಕರಣಕ್ಕೆ ಸಂಬಂಧಿಸಿ ಕಾರ್ಯಕ್ರಮ ಆಯೋಜಕರು ಮತ್ತು ಎಬಿವಿಪಿ ಸಂಘಟನೆ ಪ್ರತ್ಯೇಕ ದೂರು ದಾಖಲಿಸಿದೆ.